ಸೋಮವಾರಪೇಟೆ, ಡಿ. ೧೫: ತಾ. ೧೬ ಮತ್ತು ೧೭ರಂದು ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಹಾಗೂ ಕುಮಾರಳ್ಳಿ ಗ್ರಾಮದಲ್ಲಿ ಡೀಮ್ಡ್ ಫಾರೆಸ್ಟ್ ಸರ್ವೆಗೆ ಕಂದಾಯ, ಅರಣ್ಯ, ಸರ್ವೆ ಇಲಾಖೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಡೀಮ್ಡ್ ಫಾರೆಸ್ಟ್ ಸರ್ವೆಗೆ ತಡೆ ನೀಡಬೇಕೆಂದು ಆಗ್ರಹಿಸಿ ರೈತ ಹೋರಾಟ ಸಮಿತಿ ಹಾಗೂ ಬೆಟ್ಟದಳ್ಳಿ ಗ್ರಾಮಸ್ಥರು ಎಸಿಎಫ್ ಗೋಪಾಲ್ ಹಾಗೂ ತಾಲೂಕು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈಗಾಗಲೇ ಸಿ ಮತ್ತು ಡಿ ಜಾಗಕ್ಕೆ ಸಂಬAಧಿಸಿದAತೆ ರಾಜ್ಯ ಸರ್ಕಾರ ವಿಶೇಷ ಸಮಿತಿ ರಚಿಸಿ ವರದಿ ಕೇಳಿದ್ದು, ಈ ವರದಿ ಸಲ್ಲಿಕೆಯಾಗುವವರೆಗೂ ಅರಣ್ಯ ಹಾಗೂ ಕಂದಾಯ ಇಲಾಖೆ ರೈತರ ಜಾಗವನ್ನು ಸರ್ವೆ ಮಾಡಬಾರದು ಎಂದು ಸಮಿತಿಯ ಪ್ರಮುಖರು ಒತ್ತಾಯಿಸಿದರು.
ಹಲವು ಕಡೆಗಳಲ್ಲಿ ಸಿ ಮತ್ತು ಡಿ ಜಾಗದಲ್ಲಿ ಡೀಮ್ಡ್ ಫಾರೆಸ್ಟ್ ಎಂದು ನಮೂದಾಗಿದೆ. ಸೆಕ್ಷನ್-೪ರಲ್ಲಿಯೂ ಇದೇ ಜಾಗವಿದೆ. ಹತ್ತಾರು ವರ್ಷಗಳಿಂದ ರೈತರು ಸಿ ಮತ್ತು ಡಿ ಜಾಗದಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೇ ಜಾಗಕ್ಕೆ ಸಂಬAಧಿಸಿದAತೆ ದಾಖಲಾತಿಗಾಗಿ ಪಾರಂ ೫೦, ೫೩, ೫೭ರಡಿಯಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆದರು.
ಈ ನಡುವೆ ಸಿ ಮತ್ತು ಡಿ ಜಾಗದ ಬಗ್ಗೆ ರೈತ ಹೋರಾಟ ಸಮಿತಿ ಸಾಕಷ್ಟು ಪ್ರತಿಭಟನೆ, ಬಂದ್ ನಡೆಸಿದ್ದು, ರಾಜ್ಯ ಮುಖ್ಯಮಂತ್ರಿ, ಕಂದಾಯ, ಅರಣ್ಯ ಇಲಾಖಾ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಹಾಗೂ ಅರಣ್ಯ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳು, ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನು ಭೇಡಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ರೈತ ಹೋರಾಟ ಸಮಿತಿ ಕಾನೂನು ಸಲಹೆಗಾರ ಬಿ.ಜೆ. ದೀಪಕ್ ನೆನಪಿಸಿದರು.
ಇದರ ಪರಿಣಾಮವಾಗಿ ಸರ್ಕಾರ ಇದೀಗ ಸಿ ಮತ್ತು ಡಿ ಜಾಗಕ್ಕೆ ಸಂಬAಧಿಸಿದAತೆ ವಾಸ್ತವಾಂಶವನ್ನು ಅಧ್ಯಯನ ಮಾಡಿ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಲಹಾತ್ಮಕ ಅನುಪಾಲನಾ ವರದಿ ನೀಡಲು ವಿಶೇಷ ಸಮಿತಿಯನ್ನು ರಚಿಸಿ ಆದೇಶಿಸಿದೆ. ಈ ಸಮಿತಿಗೆ ಸರ್ಕಾರದ ಮಟ್ಟದಲ್ಲಿ ಅಧಿಕೃತ ಸೌಲಭ್ಯಗಳನ್ನು ಕಲ್ಪಿಸಿದ ನಂತರ ಕಾರ್ಯಾರಂಭ ಮಾಡಲಿದೆ. ಅಲ್ಲಿಯವರೆಗೂ ಸ್ಥಳೀಯ ಮಟ್ಟದಲ್ಲಿ ಯಾವುದೇ ಸರ್ವೆಗಳನ್ನು ಮಾಡಬಾರದು ಎಂದು ಬಿ.ಜೆ. ದೀಪಕ್ ಮನವಿ ಮಾಡಿದರು.
ಸಮಿತಿಯು ಸರ್ಕಾರಕ್ಕೆ ಅನುಪಾಲನಾ ವರದಿ ಸಲ್ಲಿಸಿದ ನಂತರ, ಸರ್ಕಾರದ ಮುಂದಿನ ಆದೇಶದಂತೆ ಕ್ರಮ ವಹಿಸಬೇಕು. ಈಗಲೇ ಸರ್ವೆಗೆ ಮುಂದಾದರೆ ರೈತರಲ್ಲಿ ಮತ್ತೆ ಗೊಂದಲ ಮೂಡುವ ಸಾಧ್ಯತೆಯಿದೆ ಎಂದು ಹೇಳಿದರು.
ಮನವಿಯನ್ನು ಸ್ವೀಕರಿಸಿದ ಎಸಿಎಫ್ ಗೋಪಾಲ್ ಮಾತನಾಡಿ, ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳು ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಪ್ರಮುಖರಾದ ಪ್ರಸ್ಸಿ, ದೇಶರಾಜ್, ಕಿಶನ್, ಗಿರೀಶ್, ದೇವರಾಜ್, ತಮ್ಮಯ್ಯ ಸೇರಿದಂತೆ ರೈತ ಹೋರಾಟ ಸಮಿತಿ ಪದಾಧಿಕಾರಿಗಳು, ಬೆಟ್ಟದಳ್ಳಿ ಗ್ರಾಮಸ್ಥರು ಇದ್ದರು.