ಭಾಗಮಂಡಲ, ಡಿ. ೧೫: ಹರಕೆಗೆ ಪ್ರಸಿದ್ಧವಾದ ಭಾಗಮಂಡಲ ಸಮೀಪದ ಚೇರಂಬಾಣೆಯ ಕೊಳಗದಾಳು ಗ್ರಾಮದ ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಹರಕೆಯ ಭಕ್ತರು ದೇವಾಲಯಕ್ಕೆ ಆಗಮಿಸಿ ಹರಕೆ ಸಲ್ಲಿಸಿದರು.

ಬೆಳಿಗ್ಗೆ ತಕ್ಕಮುಖ್ಯಸ್ಥರು, ಗ್ರಾಮಸ್ಥರು ಪಾಕ ಹೊಳೆಯಲ್ಲಿ ಸ್ನಾನ ಮಾಡಿದರು. ಬಳಿಕ ಗಂಗಾ ಪೂಜೆ ನಡೆಯಿತು. ಮುಕ್ಕಾಟಿ ಐನ್ ಮನೆಗೆ ತೆರಳಿ ದುರ್ಗಾಪರಮೇಶ್ವರಿಗೆ ತೊಡಿಸುವ ಅಲಂಕಾರದ ವಸ್ತುಗಳನ್ನು ತಂದು ಬಳಿಕ ದೇವರ ಅಲಂಕಾರ ಪೂಜೆ ನಡೆಯಿತು. ನಂಬಿಕೆಯ ಪ್ರತೀಕವಾಗಿರುವ ಪಾಕ ನದಿಯ ಮೀನುಗಳಿಗೆ ಭಕ್ತರು ಅಕ್ಕಿಯನ್ನು ಹಾಕಿ ದೇವಾಲಯಕ್ಕೆ ಬಂದು ಹರಕೆ ಸಲ್ಲಿಸಿದರು. ಬಳಿಕ ಮಹಾಪೂಜೆ ನಡೆಯಿತು. ಊರಿನವರು ತಂದ ಅಕ್ಕಿಯನ್ನು ಪಾಯಸ ಮಾಡಿ ಭಕ್ತರಿಗೆ ವಿತರಿಸಲಾಯಿತು. ಇಂದು ಮಂಗಳವಾರ ಕಳಸ ಪೂಜೆಯೊಂದಿಗೆ ಊರಿನವರು ಹರಕೆ ಸಲ್ಲಿಸುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಗುವುದು.