ಮಡಿಕೇರಿ, ಡಿ., ೧೫ :ಬದುಕಿನ ಜಂಜಾಟವನ್ನು ಮರೆತು ದೈವತ್ವದ ಚಿಂತನೆಯತ್ತ ಮನಸ್ಸು ಹರಿಯಲು ಸಾಮೂಹಿಕ ಭಜನೆ ಅತ್ಯಂತ ಉಪಯುಕ್ತ ಮಾಧ್ಯಮ ಎಂದು “ಶಕ್ತಿ”ಸಂಪಾದಕ ಜಿ.ಚಿದ್ವಿಲಾಸ್ ಬಣ್ಣಿಸಿದರು.

ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ೩೫ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಅಖಂಡ ಏಕಹ ಭಜನೆಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಹಿತವಚನ ನೀಡಿದರು.

ಸಾಮೂಹಿಕ ಭಜನಾ ಕಾರ್ಯಕ್ರಮಗಳತ್ತ ಪುಟ್ಟ ಮಕ್ಕಳನ್ನು ಕೂಡ ಪೋಷಕರು ತಯಾರು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದ ಅವರು, ಧರ್ಮ ಸಂಸ್ಕೃತಿ ಸಾಹಿತ್ಯ ಸಂಸ್ಕಾರಗಳ ರಕ್ಷಣೆಗೆ ಇಂತಹ ವೇದಿಕೆಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ಸಾಮೂಹಿಕ ಭಜನೆ ಒಂದು ಪ್ರಾಯೋಗಿಕ ಆಧ್ಯಾತ್ಮಿಕತೆಯ ಪ್ರಯೋಗ ಎಂದು ಹೇಳಿದ ಚಿದ್ವಿಲಾಸ್ ಅವರು ದೈಹಿಕ ಕಾಯಿಲೆಗೆ ಹಲವಷ್ಟು ಚಿಕಿತ್ಸೆಗಳು ಲಭ್ಯವಿದ್ದರೂ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಭಜನೆ ಅಂತಹ ಮಾಧ್ಯಮಗಳು ಅತ್ಯಂತ ಪರಿಣಾಮಕಾರಿ ಎಂದು ವಿವರಿಸಿದರು.

ಭಾರತೀಯ ಸನಾತನ ಧರ್ಮ ಸಂಸ್ಕೃತಿ ಆಚಾರ ವಿಚಾರ ಇವುಗಳನ್ನು ರಕ್ಷಿಸ ಬೇಕಾಗಿರುವುದು ಮುಂದಿನ ಯುವ ಪೀಳಿಗೆಯ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಕಳೆದ ೩೫ ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಕಂಪನವನ್ನು ಕೊಡಗಿನಲ್ಲಿ ಮೂಡಿಸುತ್ತಿರುವುದು ಅತ್ಯಂತ ಹೆಮ್ಮೆ ಎಂದು ಶ್ಲಾಘಿಸಿದರು.

ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಮಾರ್ಗದರ್ಶಿ ಡಾಕ್ಟರ್ ಪಾಟ್ಕರ್ ಹಾಗೂ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚುಮ್ಮಿದೇವಯ್ಯ ವೇದಿಕೆಯಲ್ಲಿದ್ದರು.

ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಪ್ರಮುಖ ಮಹೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಸುಧಾಕರ್ ಅವರಿಂದ ವರದಿ, ಚಂದ್ರಾವತಿ ಅವರಿಂದ ಅತಿಥಿಗಳ ಪರಿಚಯ, ಅಮೃತ್ ರಾಜ್ ಅವರಿಂದ ವಂದನಾರ್ಪಣೆ ನಡೆಯಿತು. ಬೆಳಿಗ್ಗೆ ಆರರಿಂದ ಆರಂಭಗೊAಡ ಭಜನಾ ಕಾರ್ಯಕ್ರಮದಲ್ಲಿ ಸುಮಾರು ೧೮ ತಂಡಗಳು ಭಾಗವಹಿಸಿ ರಾತ್ರಿ ಮೂರು ತಂಡಗಳಿAದ ನೃತ್ಯ ಭಜನಾ ಕಾರ್ಯಕ್ರಮಗಳು ನಡೆದವು. ೫ನೇ ಪುಟಕ್ಕೆ

(ಮೊದಲ ಪುಟದಿಂದ)

ಏಕಾಹ ಭಜನೆಯಲ್ಲಿ ಪಾಲ್ಗೊಂಡ ೧೮ ಭಜನಾ ತಂಡಗಳು

ಶ್ರೀರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಸಮಿತಿ ಮಡಿಕೇರಿ, ಭಕ್ತಿಲಹರಿ ತಂಡ ಮಡಿಕೇರಿ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಮಂಗಳಾದೇವಿ ನಗರ, ಮದೆಮಹೇಶ್ವರ ಭಜನಾ ಮಂಡಳಿ, ಮದೆ, ಶ್ರೀ ಸನಾತನ ಭಜನಾ ಮಂಡಳಿ ಕಗ್ಗೋಡ್ಲು, ಶ್ರೀದೇವಿ ಭಜನಾ ಮಂಡಳಿ ಜೋಡುಪಾಲ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಎರಡನೇ ಮೊಣ್ಣಂಗೇರಿ, ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಮಡಿಕೇರಿ, ಶ್ರೀ ಕೋದಂಡ ರಾಮ ಭಜನಾ ಮಂಡಳಿ ಮಡಿಕೇರಿ, ಇಸ್ಕಾನ್ ತಂಡ ಮಡಿಕೇರಿ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ದೇವರಕೊಲ್ಲಿ, ಶ್ರೀಶೈತಿ ಲಯ ಭಜನಾ ಮಂಡಳಿ, ಮಡಿಕೇರಿ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಡಿಕೇರಿ. ಕುಣಿತ ಭಜನೆ - ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು, ಆದಿಶಕ್ತಿ ವಿನಾಯಕ ಭಜನಾ ಮಂಡಳಿ ಉಡೋತ್, ಶ್ರೀ ಮದೆ ಮಧುರಪ್ಪ ಕುಣಿತ ಭಜನಾ ತಂಡ, ಮದೆನಾಡು.