ಕೂಡಿಗೆ, ಡಿ. ೧೬ : ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ವಾರ್ಷಿಕ ಪೂಜೋತ್ಸವ ಹಾಗೂ ಹನುಮ ಜಯಂತಿ ಅಂಗವಾಗಿ ಮರೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಪೂಜೋತ್ಸವ ನಡೆಯಿತು.
ಪೂಜೋತ್ಸವದ ಅಂಗವಾಗಿ ದೇವಾಲಯ ಸಮಿತಿ ಮತ್ತು ಗ್ರಾಮದ ಮಹಿಳೆಯರಿಂದ ನದಿಯಲ್ಲಿ ಗಂಗಾಪೂಜೆ, ನಂತರ ಗಂಗೆಯನ್ನು ಹೊತ್ತ ಮಹಿಳೆಯರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬಂದು ಸ್ವಾಮಿಗೆ ಅಭಿಷೇಕ, ಬಳಿಕ ಮಹಾಪೂಜೆ, ಮಹಾಮಂಗಳಾರತಿ ನಂತರ ಅನ್ನಸಂರ್ತಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮಿ ಆಶೀರ್ವಚನ ನೀಡಿದರು.ಈ ಸಂದರ್ಭ ಕಾಂಗ್ರೆಸ್ ಮುಖಂಡ ನಟೇಶ್ ಗೌಡ, ಉದ್ಯಮಿ ರಂಜನ್, ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಸಿ. ಮಹದೇವ, ಉಪಾಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಪ್ರತಾಪ್ ರೆಡ್ಡಿ ಸೇರಿದಂತೆ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
ಪೂಜೋತ್ಸವ ನಂತರ ಶ್ರೀ ಆಂಜನೇಯ ಸ್ವಾಮಿಯ ಕಂಚಿನ ವಿಗ್ರಹವನ್ನು ಬೆಳ್ಳಿಯ ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿ ಹೆಬ್ಬಾಲೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ತಲುಪಿತು. ನಂತರ ದೇವಾಲಯದಲ್ಲಿ ಪೂಜೆ, ಮದ್ದುಗುಂಡುಗಳ ಪ್ರದರ್ಶನದ ನಂತರ ಸ್ವಸ್ಥಾನಕ್ಕೆ ತೆರಳಲಾಯಿತು. ನಂತರ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀ ಬಸವೇಶ್ವರ ಮತ್ತು ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು.