ವೀರಾಜಪೇಟೆ, ಡಿ. ೧೬ : ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆ ಹಾಗೂ ಕೆದಮುಳ್ಳೂರು ಫಾತಿಮಾ ಮಾತೇಯ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ತಾ. ೧೭ ರಂದು ಕೆದಮುಳ್ಳೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಕಾರ್ಯಕ್ರಮ ಸಂಚಾಲಕ ಕಿಶೋರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆದಮುಳ್ಳೂರು ಗ್ರಾಮದ ಸೆಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಹಾಗೂ ಕಣ್ಣಿನ ಪೊರೆ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ. ಅಮ್ಮತ್ತಿಯ ಆರ್.ಐ.ಹೆಚ್.ಪಿ ಆಸ್ಪತ್ರೆಯ ನುರಿತ ವೈದ್ಯರು ಆರೋಗ್ಯ ಹಾಗೂ ನೇತ್ರ ಚಿಕಿತ್ಸೆಯನ್ನು ಒದಗಿಸಲಿ ದ್ದಾರೆ. ಅಂದು ಬೆಳಿಗ್ಗೆ ೧೦ ರಿಂದ ಮದ್ಯಾಹ್ನ ೧ ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.