ಮಡಿಕೇರಿ, ಡಿ. ೧೬ : ಅರಣ್ಯ ಇಲಾಖೆಯಲ್ಲಿ ಅಪರೂಪದ ಹಾಗೂ ಗಮನಾರ್ಹ ಘಟನೆಯೊಂದು ದಾಖಲಾಗುತ್ತಿದೆ. ಕೊಡಗು ಜಿಲ್ಲೆಯ ಕರಿಕೆ ಗ್ರಾಮದ ನಿವಾಸಿಗಳಾದ ಅವಳಿ ಸಹೋದರರು ಕಟ್ಟಕೋಡಿ ಹರೀಶ ಮತ್ತು ಕಟ್ಟಕೋಡಿ ಗಿರೀಶ ಅವರು ದಶಕಗಳ ಕಾಲ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇದೇ ಡಿಸೆಂಬರ್ ೩೧ರಂದು ನಿವೃತ್ತಿಯಾಗುತ್ತಿದ್ದಾರೆ

ಒಂದೇ ತಾಯಿಯ ಗರ್ಭದಲ್ಲಿ ಜನಿಸಿದ ಈ ಅವಳಿ ಸಹೋದರರು, ವೃತ್ತಿಜೀವನದಲ್ಲಿಯೂ ಒಂದೇ ಹಾದಿಯನ್ನು ಆರಿಸಿಕೊಂಡು ಅರಣ್ಯ ಇಲಾಖೆ ಮೂಲಕ ಪ್ರಕೃತಿ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕೊಡಗು ಜಿಲ್ಲೆಯ ಕಠಿಣ ಅರಣ್ಯ ಪ್ರದೇಶಗಳು, ಮಳೆ-ಬಿಸಿಲಿನ ನಡುವೆಯೂ ತಮ್ಮ ಕರ್ತವ್ಯವನ್ನು ಶಿಸ್ತು ಮತ್ತು ಸಮರ್ಪಣೆಯಿಂದ ನಿರ್ವಹಿಸಿ ಇಲಾಖೆಗೆ ಗೌರವ ತಂದಿದ್ದಾರೆ.

ಸ್ವಾರಸ್ಯಕರ ಸಂಗತಿ ಎಂದರೆ, ಸೇವೆಯಲ್ಲಷ್ಟೇ ಅಲ್ಲದೆ ವೈಯಕ್ತಿಕ ಜೀವನದಲ್ಲಿಯೂ ಇವರ ಬದುಕು ಅಪರೂಪದ ಸಾಮ್ಯತೆಯನ್ನು ಹೊಂದಿದೆ. ಇವರು ಸಹೋದರಿಯರನ್ನೇ ವಿವಾಹವಾಗಿದ್ದು, ಕುಟುಂಬ ಜೀವನದಲ್ಲೂ ಹೊಂದಾಣಿಕೆ ಹಾಗೂ ಮೌಲ್ಯಗಳಿಗೆ ಉತ್ತಮ ಮಾದರಿಯಾಗಿದ್ದಾರೆ.

ಇನ್ನೂ ವಿಶೇಷವೆಂದರೆ, ಹರೀಶರವರ ಪುತ್ರ ಹಾಗೂ ಗಿರೀಶರವರ ಪುತ್ರ ಇಬ್ಬರೂ ತಮ್ಮ ಅಪ್ಪಂದಿರAತೆ ಒಂದೇ ಇಲಾಖೆಯಾದ ಸಹಕಾರಿ ಸಂಸ್ಥೆಯ ಉದ್ಯೋಗಿಗಳು.

ಜನನ ಒಂದೇ ದಿನ, ಸೇವೆ ಒಂದೇ ಇಲಾಖೆ, ಜೀವನದ ಪ್ರಮುಖ ಹಂತಗಳಲ್ಲಿ ಒಂದೇ ರೀತಿಯ ನಿರ್ಣಯಗಳು ಮತ್ತು ಕೊನೆಗೆ ನಿವೃತ್ತಿಯ ದಿನವೂ ಒಂದೇ - ಇದು ಕೇವಲ ಯಾದೃಚ್ಛಿಕವಲ್ಲ; ಇದು ಶಿಸ್ತು, ಸಮರ್ಪಣೆ ಮತ್ತು ಸೇವಾ ನಿಷ್ಠೆಯ ಪ್ರತೀಕವಾಗಿದೆ. ಸೇವೆಯಿಂದ ನಿವೃತ್ತಿಯಾಗುವ ಹಂತದಲ್ಲಿದ್ದರೂ, ಕಟ್ಟಕೋಡಿ ಹರೀಶ ಮತ್ತು ಕಟ್ಟಕೋಡಿ ಗಿರೀಶ ಅವರ ಪ್ರಾಮಾಣಿಕ ಸೇವೆ, ಅನುಭವ ಹಾಗೂ ಅರಣ್ಯ ಪ್ರೇಮ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ಉಳಿಯಲಿದೆ.

-ಕಟ್ಟಕೋಡಿ ಪಿ. ಗಣೇಶ್, ಕರಿಕೆ