ಕೂಡಿಗೆ, ಡಿ. ೧೭: ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸೆಕ್) ಆಶ್ರಯದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಶ್ರೀ ವಿನಾಯಕ ಯುವಕ ಸಂಘದ ಸಹಯೋಗದೊಂದಿಗೆ, ಬೆಂಗಳೂರಿನ ಗೋಕುಲ್ ದಾಸ್ ಸಂಸ್ಥೆ ಬೆಂಬಲದೊAದಿಗೆ ಮಾದರಿ ಗ್ರಾಮ ಜಾಗೃತಿ ಕಾರ್ಯಕ್ರಮ ಚಿಕ್ಕತ್ತೂರು ಸಮುದಾಯ ಭವನದಲ್ಲಿ ನಡೆಯಿತು.

ಗ್ರಾಮಮಟ್ಟದ ಹವಾಮಾನ ಉದ್ದೇಶಿತ ಕಾರ್ಯಗಳು, ನಗರದಂಚಿನ ಸಮುದಾಯಗಳ ಸ್ಥಿತಿಸ್ಥಾಪಕತ್ವ ಬಲವರ್ಧನಾ ಉಪಕ್ರಮಗಳು ಎಂಬ ವಿಚಾರದಡಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಗ್ರಾಮಸ್ಥರಲ್ಲಿ ವಿವಿಧ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿದರು.

ಪಿರಿಯಾಪಟ್ಟಣ ಪುರಸಭೆಯ ಪರಿಸರ ಅಭಿಯಂತರ ವೈಶಾಲಿ ಅವರು ಘನತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ಒದಗಿಸಿದರು. ಹಸಿಗಿಂತ ಒಣಕಸ ನಿರ್ವಹಣೆ ಶ್ರಮದಾಯಕವಾಗಿದೆ. ಅದರಲ್ಲೂ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಕವರ್‌ಗಳ ಸಮಸ್ಯೆ ಬಹಳಷ್ಟಿದೆ. ಆದಷ್ಟು ಇಂತಹ ಪ್ಲಾಸ್ಟಿಕ್ ಕವರ್ ಬಳಕೆ ಕಡಿಮೆ ಮಾಡಬೇಕಿದೆ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಮನೆಗಳಿಂದಲೇ ಹಸಿ ಕಸ, ಒಣ ಕಸ ಸಮರ್ಪಕ ನಿರ್ವಹಣೆ ಎಲ್ಲರ ಜವಾಬ್ದಾರಿಯಾಗಬೇಕು. ಸ್ವಚ್ಛ ನಗರವಾಗಿಸುವಲ್ಲಿ ಆಡಳಿತದೊಂದಿಗೆ ಸಾರ್ವಜನಿಕರ ಸಹಕಾರ ಕೂಡ ಮುಖ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಬಿ.ವಿ. ಆನಂದ್ ಮಾತನಾಡಿ, ನಗರೀಕರಣದಿಂದ ಅರಣ್ಯ, ದಟ್ಟಾರಣ್ಯಗಳು ಕ್ಷೀಣಿಸುತ್ತಿದ್ದು ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿರುವ ಬಗ್ಗೆ ಮಾಹಿತಿ ಒದಗಿಸಿದರು. ಕೊಡಗಿನ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದರು.

ರಸ್ತೆ, ಚರಂಡಿ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ವ್ಯವಸ್ಥೆ ಒಳಗೊಂಡAತೆ ಎಲ್ಲಾ ಮೂಲಸೌಕರ್ಯ, ವ್ಯವಸ್ಥೆಗಳು ಸಮರ್ಪಕವಾಗಿದ್ದಾಗ ಮಾತ್ರ ಅದು ಮಾದರಿ ಗ್ರಾಮವಾಗಲಿದೆ. ಅದರಲ್ಲೂ ಆ ಗ್ರಾಮದಲ್ಲಿ ಮದ್ಯಪಾನಿಗಳು ಇರಲೇಬಾರದು. ಇದರ ಬಗ್ಗೆ ಗ್ರಾಮಸ್ಥರು ಚಿಂತನೆ ಹರಿಸಬೇಕಿದೆ ಎಂದರು.

ಬೆAಗಳೂರಿನ ಗೋಕುಲ್ ಎಕ್ಸ್ಪೋರ್ಟ್ಸ್ನ ಮಾನವ ಸಂಪನ್ಮೂಲಗಳ ಹಿರಿಯ ನಿರ್ವಾಹಕ ಕೆ.ಟಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಗ್ರಾಮಕ್ಕೆ ಅವಶ್ಯವಿರುವ ಯೋಜನೆಗಳು, ಕಾಮಗಾರಿಗಳು ಸರಕಾರ ಮಟ್ಟದಲ್ಲಿ ಜಾರಿಗೊಳ್ಳುವುದು ವಾಡಿಕೆ. ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಕೂಡ ಹಲವು ಸಾಮಾಜಿಕ ಯೋಜನೆಗಳು ಅನುಷ್ಠಾನ ಮಾಡಲಾಗುತ್ತಿದೆ. ಮಾದರಿ ಗ್ರಾಮಕ್ಕೆ ಬೇಕಾದ ಅವಶ್ಯಕತೆಗಳಿದ್ದಲ್ಲಿ ನಮ್ಮ ಗಮನಕ್ಕೆ ತಂದಲ್ಲಿ ಸಾಧ್ಯವಾದ ಉಪಯುಕ್ತ ಯೋಜನೆಗಳನ್ನು ಸಂಸ್ಥೆ ವತಿಯಿಂದ ಅನುಷ್ಠಾನಗೊಳಿಸಲಾಗುವುದು ಎಂದರು.

ವಿನಾಯಕ ಯುವಕ ಸಂಘದ ಅಧ್ಯಕ್ಷ ಸಿ.ಸಿ. ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾದರಿ ಗ್ರಾಮ ಯೋಜನೆಯಡಿ ನಮ್ಮ ಗ್ರಾಮವನ್ನು ಆಯ್ಕೆ ಮಾಡಿರುವುದು ಸಂತಸ ವಿಚಾರ. ನಮ್ಮ ವೈಯಕ್ತಿಕ ಅಭಿವೃದ್ಧಿಯೊಂದಿಗೆ ಸಾಮಾಜಿಕ ಜವಾಬ್ದಾರಿ ಕೂಡ ಅಗತ್ಯವಿದೆ. ಸಮಾಜದ ಅಭಿವೃದ್ಧಿ ಬಗ್ಗೆ ಎಲ್ಲರೂ ಚಿಂತನೆ ಹರಿಸುವುದು ಅಗತ್ಯವಿದೆ ಎಂದರು. ಘನ ತ್ಯಾಜ್ಯ ನಿರ್ವಹಣೆಗೆ ಕೇರಳ ಮಾದರಿಯಲ್ಲಿ ಬಾಕ್ಸ್ ಘಟಕಗಳನ್ನು ಗ್ರಾಮದ ಆಯ್ದ ಭಾಗಗಳಲ್ಲಿ ಅಳವಡಿಸಿಕೊಡಲು ಮನವಿ ಸಲ್ಲಿಸಿದರು. ಈ ಸಂದರ್ಭ ಕೂಡುಮಂಗಳೂರು ಗ್ರಾ.ಪಂ. ಸದಸ್ಯರಾದ ಪಾರ್ವತಮ್ಮ, ಖತೀಜಾ, ಯುವಕ ಸಂಘದ ಗೌರವಾಧ್ಯಕ್ಷ ಯೋಗೇಂದ್ರನ್, ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಾಮೇಗೌಡ, ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಜೆ. ಕುಮಾರ್, ನಗರಗಳ ವಿದ್ಯುನ್ಮಾನ ಅಧ್ಯಯನ ಸಂಸ್ಥೆ ಮುಖ್ಯಸ್ಥೆ ಡಾ. ಎಸ್. ಮಾನಸಿ, ಸಹಾಯಕ ಪ್ರಾಧ್ಯಾಪಕ ಡಾ. ಚನ್ನಮ್ಮ ಕಂಬಾರ ಸೇರಿದಂತೆ ಗ್ರಾಮಸ್ಥರು ಇದ್ದರು.