ಮಡಿಕೇರಿ, ಡಿ. ೧೭ : ಕೊಡಗು ಜಿಲ್ಲೆಯ ಜಮ್ಮಾಬಾಣೆ ಜಮೀನಿಗೆ ಸಂಬAಧಿಸಿದAತೆ ರೂಪಿಸಲಾಗಿರುವ ತಿದ್ದುಪಡಿ ವಿಧೇಯಕಕ್ಕೆ ನಿನ್ನೆ ಸದನದಲ್ಲಿ ಪಕ್ಷಾತೀತವಾಗಿ ಅಂಗೀಕಾರ ದೊರಕುವ ಮೂಲಕ ಜಿಲ್ಲೆಯ ಜಮ್ಮಾ ಹಿಡುವಳಿದಾರರು ಎದುರಿಸುತ್ತಿದ್ದ ಬಹು ವರ್ಷಗಳ ಸಮಸ್ಯೆಗೆ ಪರಿಹಾರ ದೊರಕುವ ಆಶಾಭಾವನೆ ಮೂಡಿದೆ. ಈ ವಿಧೇಯಕಕ್ಕೆ ಸಂಬAಧಿಸಿದAತೆ ರಚಿಸಲಾಗಿದ್ದ ಸದನದ ಪರಿಶೀಲನಾ ಸಮಿತಿ ಹಲವು ಚರ್ಚೆಗಳನ್ನು ನಡೆಸಿ ಸೂಕ್ತ ನಿರ್ಣಯದೊಂದಿಗೆ ಈ ವಿಧೇಯಕವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿತ್ತು. ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಇಚ್ಚಾಶಕ್ತಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಕ್ರಿಯಾಶೀಲ ಪ್ರಯತ್ನ ಸಮಿತಿಯಲ್ಲಿದ್ದ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಇನ್ನಿತರ ಸದಸ್ಯರು ಕೂಲಂಕಶ ಚರ್ಚೆಗಳ ಬಳಿಕ ಇದನ್ನು ಅಂತಿಮಪಡಿಸಿದ್ದರು.

ನಿನ್ನೆ ಕಂದಾಯ ಸಚಿವರು ವಿಧಾನಸಭೆಯಲ್ಲಿ ಈ ಬಗ್ಗೆ ವಿವರಣೆ ನೀಡಿ ವಿಧೇಯಕಕ್ಕೆ ಅಂಗೀಕಾರ ನೀಡಲು ವಿನಂತಿಸಿದ ಬಳಿಕ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮತಕ್ಕೆ ಹಾಕಿದರು. ನಂತರ ಎಲ್ಲ ಸದಸ್ಯರ ಪರವಾದ ನಿಲುವಿನೊಂದಿಗೆ ಅಂಗೀಕಾರವಾಗಿರುವ ಬಗ್ಗೆ ಸಭಾಧ್ಯಕ್ಷರು ಪ್ರಕಟಿಸಿದ ಬಳಿಕ ಈ ಕುರಿತ ಚರ್ಚೆಗೆ ಅವಕಾಶ ಮಾಡಿಕೊಡಲಾಯಿತು.

ಸಮಸ್ಯೆ ಬಗ್ಗೆ ವಿವರಣೆಯಿತ್ತ ಕೃಷ್ಣಭೈರೇಗೌಡ

ಈ ಸಮಸ್ಯೆ ಬಗ್ಗೆ ಅರ್ಥವಾಗುವ ರೀತಿಯಲ್ಲಿ ಸಾಧ್ಯವಾದಷ್ಟು ಸರಳ ರೀತಿಯಲ್ಲಿ ಸ್ಪಷ್ಟ ಮಾಡಿರುವುದಾಗಿ ಕಂದಾಯ ಸಚಿವರು ತಿಳಿಸಿ ಹಿಂದಿನ ಸಮಸ್ಯೆ ಏನಿತ್ತು ಎಂಬದನ್ನು ವಿವರಿಸಿದರು.ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಸ್ವಾತಂತ್ರö್ಯ ಪೂರ್ವದಲ್ಲಿ ಬ್ರಿಟಿಷರು ರಾಜರ ಕಾಲದ ಆಡಳಿತ ಇದ್ದ ಸಂದರ್ಭದಲ್ಲಿ ಅವರದ್ದೇ ಆದ ಕಾನೂನು ಜಾರಿಯಲ್ಲಿತ್ತು. ೧೯೬೪ರಲ್ಲಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಯನ್ನು ರಾಜ್ಯಕ್ಕೆ ಏಕರೂಪದಲ್ಲಿ ತರಲಾಗಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಈ ಏಕರೂಪ ಕಾಯಿದೆಗೆ ತದ್ವಿರುದ್ಧವಾಗಿ ಕೊಡಗಿನಲ್ಲಿ ಈ ಹಿಂದೆ ಇದ್ದ ಪದ್ಧತಿಯ ಪ್ರಕಾರವೇ ದಾಖಲೆ ಮುಂದುವರಿದಿತ್ತು. ಇದು ೨೦೦೦ನೇ ಇಸವಿಯ ತನಕವೂ ಮುಂದುವರಿಯಿತು. ೨೦೦೦ನೇ ಇಸವಿಯಲ್ಲಿ ಭೂಮಿ ನಿಯಮ ಜಾರಿಗೆ ಬಂದು ಪಹಣಿಯ ಕಡ್ಡಾಯ ಗಣಕೀಕರಣ ಆದಾಗ ಇದು ನಿಲ್ಲುವಂತಾಗಿತ್ತು. ಅಲ್ಲಿಯ ತನಕ ಕೊಡಗಿನಲ್ಲಿ ಮುಂದುವರಿದಿದ್ದ ಪದ್ಧತಿಗೂ ರಾಜ್ಯದಲ್ಲಿ ಬದಲಾಗಿದ್ದ ಕಾನೂನಿಗೂ ಸಾಮ್ಯತೆ ಇರಲಿಲ್ಲ. ಬದಲಾದ ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಪಟ್ಟೆದಾರ ಎಂಬ ಉಲ್ಲೇಖವೇ ಇಲ್ಲ. ಆದರೆ ಕೊಡಗಿನಲ್ಲಿ ಪಟ್ಟೆದಾರ ಕಲಂ ಎಂಬದು ಇತ್ತು. ಈ ಸಮಸ್ಯೆ ಆಗಲೇ ಸರಿಯಾಗಬೇಕಿತ್ತಾದರೂ ಈಡೇರಿರಲಿಲ್ಲ. ಈ ನಡುವೆ ಆಗ ಇದ್ದ ಜಿಲ್ಲಾಧಿಕಾರಿಗಳು ಕಾನೂನಿನಡಿ ಸಮರ್ಪಕವಾಗಿ ಚರ್ಚಿಸದೆ ತಮ್ಮ ಹಂತದಲ್ಲೇ ಕಲಂ ೯ರಲ್ಲಿ ಪಟ್ಟೆದಾರ ಎಂದು ನಮೂದಿಸಲು ಆದೇಶ ಹೊರಡಿಸಿಬಿಟ್ಟಿದ್ದರು. ಇದರಿಂದಾಗಿ ಪಹಣಿಯ ೯ನೇ ಕಲಂನಲ್ಲಿ ಪಟ್ಟೆದಾರರ ಹೆಸರು ಬರುವಂತಾಗಿದ್ದು ಮಾಲೀಕರಲ್ಲದವರೂ ಪಹಣಿಯಲ್ಲಿ ಸೇರಿದ್ದರಿಂದ ಜಾಗದ ಹಕ್ಕಿಗೆ ಸಂಬAಧಿಸಿದAತೆ ಸಮಸ್ಯೆ ಉಂಟಾಗಿತ್ತು ಎಂಬದಾಗಿ ವಿವರಣೆಯಿತ್ತರು.

ಇದು ೨೦೧೨-೧೩ರ ಸಂದರ್ಭ ತಿದ್ದುಪಡಿ ಆಗಿ ಒಂದಷ್ಟು ನಿರಾಳವಾಯಿತಾದರೂ ತಳಮಟ್ಟದಿಂದ ಸಮಸ್ಯೆ ಇತ್ಯರ್ಥವಾಗಿರಲಿಲ್ಲ. ಇದರಿಂದಾಗಿ ಇವೆಲ್ಲವನ್ನೂ ಪರಿಶೀಲಿಸಿ ಈ ಹೊಸ ತಿದ್ದುಪಡಿ ಆದೇಶ ತಂದಿರುವುದಾಗಿ ಅವರು ತಿಳಿಸಿದರು.

ಇದನ್ನು ಕೊಡಗು ಜಿಲ್ಲೆಯಲ್ಲಿ ಅದಾಲತ್ ಮಾದರಿಯಲ್ಲಿ ಮಾಡಿ ಅನುಷ್ಠಾನಕ್ಕೆ ತರಲಾಗುವುದು ಎಂದು ಕೃಷ್ಣಭೈರೇಗೌಡರು ಮಾಹಿತಿ ನೀಡಿದರು. ಅಲ್ಲದೆ ಈ ಬಗ್ಗೆ ಜನರ ತಕರಾರು ಅಥವಾ ಪಟ್ಟೆದಾರರ ತಕರಾರುಗಳು ಇದ್ದಲ್ಲಿ ಅದಕ್ಕೂ ಅವಕಾಶ ಮಾಡಿಕೊಡಲಾಗುವುದು ಇದನ್ನು ಅವಲೋಕಿಸಲಾಗುವುದು ಎಂದು ಅವರು ಹೇಳಿದರಲ್ಲದೆ ಈಗ ಸಮಿತಿ ಎಲ್ಲವನ್ನೂ ಕೂಲಂಕುಶವಾಗಿ ಅಧ್ಯಯನ ಮಾಡಿ ವಿಧೇಯಕ ಜಾರಿಗೆ ತರುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಆರ್. ಅಶೋಕ್ ಅಭಿಪ್ರಾಯ

ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು ಇದು ಸ್ವಾಗತ ಮಾಡುವಂತಹ ಬಿಲ್ ಆಗಿದೆ. ತಾವು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲೂ ಈ ಬಗ್ಗೆ ಪ್ರಯತ್ನ ಮಾಡಲಾಗಿತ್ತು. ತಮ್ಮ ಸರಕಾರವೂ ಈ ಬಗ್ಗೆ ಮುತುವರ್ಜಿ ವಹಿಸಿತ್ತು. ಕೋರ್ಟ್ ಮೆಟ್ಟಿಲನ್ನೂ ಏರಿತ್ತು ಎಂದು ನೆನಪಿಸಿದರು. ಇದು ಬಹು ವರ್ಷದ ಸಮಸ್ಯೆಯಾಗಿದ್ದು ಮುಂದೆ ಜಿಲ್ಲಾಧಿಕಾರಿ, ಕಂದಾಯ ಇಲಾಖಾಧಿಕಾರಿಗಳಿಗೆ ಸರಕಾರ ಯಾವ ರೀತಿ ಸೂಚನೆ ನೀಡುತ್ತದೆ. ಸತ್ತಿರೋರು ತುಂಬಾ ಜನ ಇದ್ದಾರೆ, ವಂಶವೃಕ್ಷ ಆಗಬೇಕಿದೆ. ಇಂತಹ ಅಡೆತಡೆಗಳನ್ನು ಸರಕಾರ ಹೇಗೆ ನಿಭಾಯಿಸಲಿದೆ ಪರಿಹಾರ ಏನು ಎಂದು ಅಶೋಕ್ ಪ್ರಶ್ನಿಸಿದರು.

ಪೊನ್ನಣ್ಣ ಪ್ರತಿಕ್ರಿಯೆ

ಚರ್ಚೆ ಸಂದರ್ಭ ಸಭಾಧ್ಯಕ್ಷರು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಂದ ವಿವರಣೆ ಬಯಸಿದರು. ಈ ವೇಳೆ ಮಾತನಾಡಿದ ಪೊನ್ನಣ್ಣ ಅವರು ಸಮಸ್ಯೆಗಳ ಬಗ್ಗೆ ವಿವರವಿತ್ತು. ತಿದ್ದುಪಡಿ ವಿಧೇಯಕದ ಹಿಂದಿನ ನಡಾವಳಿಗಳನ್ನು ಗಮನಕ್ಕೆ ತಂದು ಪರಿಶೀಲನಾ ಸಮಿತಿಯ ಎಲ್ಲಾ ಸದಸ್ಯರು, ಕಂದಾಯ ಸಚಿವರ ಇಚ್ಚಾಶಕ್ತಿಯಂತೆ ಸಮಸ್ಯೆಗೆ ಬಹುತೇಕ ಪರಿಹಾರ ದೊರೆತಂತಾಗಿದೆ ಎಂದರು.

ವಿಪಕ್ಷ ನಾಯಕರು ಪ್ರಸ್ತಾಪಿಸಿದಂತೆ ಮುಂದೆ ಇದರ ಅನುಷ್ಠಾನ ಬಹು ಮುಖ್ಯವಾಗಿದೆ. ಆರ್.ಟಿ.ಸಿ.ಗಳಲ್ಲಿರುವ ಹೆಸರನ್ನು `ಕಾನ್ಸಿಕ್ವೆನ್ಸಿಯಲ್ ಎಂಟ್ರೀಸ್’ ಪದ ಬಳಿಸಿ ತಿದ್ದುಪಡಿ ಮಾಡಲಾಗುವುದು. ಅಲ್ಲದೆ ಕೆಲವು ನಿಯಮಗಳು ಅಗತ್ಯವಿದೆ. ಜಿಲ್ಲಾಧಿಕಾರಿ, ಕಂದಾಯ ಇಲಾಖಾಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಲಾಗುವುದು. ಕ್ಯಾಂಪ್ ಮಾದರಿಯಲ್ಲಿ ಈ ಬಗ್ಗೆ ಕ್ರಮವಹಿಸಲಾಗುವುದು. ಸಾಲ ಪಡೆಯಲು, ಮಾರಾಟ, ವಿಭಜನೆ, ಕಂದಾಯ ನಿಗದಿಯ ಸಮಸ್ಯೆಗಳು ಸರಿಯಾಗಬೇಕಿದೆ. ಈಗಿನ ತಿದ್ದುಪಡಿ ಸರಿಯಾಗಿದ್ದು ಪರಿಶೀಲನಾ ಸಮಿತಿಯ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ. ಇವರೆಲ್ಲನ್ನೂ ಕೊಡಗಿನ ಜನರ ಪರವಾಗಿ ಸ್ಮರಿಸಿಕೊಳ್ಳಲಾಗುವುದು ಎಂದು ಪೊನ್ನಣ್ಣ ಹೇಳಿದರು.

ಸಮಿತಿ ಸದಸ್ಯರುಗಳಾದ ಅರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.