ಕೂಡಿಗೆ, ಡಿ. ೧೭: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದ ಬಸ್ ತಂಗುದಾಣದ ಜಾಗ ಅತಿಕ್ರಮಣ, ಕೆರೆಗಳ ಒತ್ತುವರಿ ತೆರವು, ಎಡದಂಡೆ ನಾಲೆಯ ರಸ್ತೆ ಸಮಸ್ಯೆ ಹಾಗೂ ಉದ್ದೇಶಿತ ಬೀದಿನಾಯಿಗಳ ಆರೈಕೆ ಕೇಂದ್ರದ ಪ್ರಸ್ತಾವನೆ ಕೈಬಿಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೆ ಮತ್ತು ಹುಲುಸೆ ಗ್ರಾಮಸ್ಥರು ಹಕ್ಕೆ ಗ್ರಾಮದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಹಕ್ಕೆ ಗ್ರಾಮದ ನಿವಾಸಿ ಸಾಮಾಜಿಕ ಹೋರಾಟಗಾರ ಮೋಹನ್ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಗ್ರಾಮದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯು ತೀವ್ರ ಸ್ವರೂಪದ ಕಡೆ ಹೋಗುತ್ತಿದಂತೆ ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದ ವಿವಿಧ ಇಲಾಖೆಯ ಅಧಿಕಾರಿಗಳು ಸ್ಧಳಕ್ಕೆ ಅಗಮಿಸಿದ್ದರು. ಈ ಸಂದರ್ಭ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು.
ಮಡಿಕೇರಿ ಹಾಗೂ ಹಾಸನ ಹೆದ್ದಾರಿಗೆ ಹೊಂದಿಕೊAಡಿರುವ ಗ್ರಾಮಕ್ಕೆ ಬಸ್ ತಂಗುದಾಣವಿಲ್ಲ. ರಸ್ತೆ ಅಭಿವೃದ್ಧಿ ಸಮಯದಲ್ಲಿ ಇದ್ದ ಹಳೆಯ ಬಸ್ ನಿಲ್ದಾಣವನ್ನು ತೆರವು ಮಾಡಲಾಗಿತ್ತು. ಆದರೆ ಅನೇಕ ವರ್ಷಗಳೇ ಕಳೆದರೂ ಇದುವರೆಗೂ ಬಸ್ ತಂಗುದಾಣ ನಿರ್ಮಿಸಿಲ್ಲ. ಹಕ್ಕೆ ಮತ್ತು ಹುಲುಸೆ ಗ್ರಾಮಗಳು ಕಾಡಂಚಿನ ಗ್ರಾಮಗಳಾಗಿದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಹಕ್ಕೆ ಗ್ರಾಮದಲ್ಲಿ ಬೀದಿನಾಯಿಗಳ ಆರೈಕೆ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿ ಜಾಗವನ್ನು ಸರ್ವೇ ಮಾಡಿ ಜಾಗ ಗುರುತಿಸಿರುವ ಕ್ರಮಕ್ಕೆ ನಮ್ಮ ವಿರೋಧವಿದೆ. ಈ ಕೂಡಲೇ ಉದ್ದೇಶಿತ ಬೀದಿನಾಯಿಗಳ ಆರೈಕೆ ಕೇಂದ್ರ ಪ್ರಸ್ತಾಪವನ್ನು ಹಿಂಪಡೆಯಬೇಕು ಎಂದು ಗ್ರಾಮಸ್ಥರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಿವಾಸ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಅವರನ್ನು ಒತ್ತಾಯಿಸಿದರು.
ಈಗಾಗಲೇ ಈ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಉಪಟಳದಿಂದ ನಲುಗಿ ಹೋಗಿರುವ ಗ್ರಾಮಗಳಿಗೆ ಗಾಯದ ಮೇಲೆ ಬರೆ ಎಳೆದಂತೆ ಬೀದಿನಾಯಿಗಳ ಆರೈಕೆ ಸ್ಥಾಪನೆಗೆ ಮುಂದಾಗಿರುವ ಅಧಿಕಾರಿಗಳ ಕ್ರಮದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಇತರೆ ಅಧಿಕಾರಿಗಳೊಂದಿಗೆ ಗ್ರಾಮದ ಸಾಮಾಜಿಕ ಹೋರಾಟಗಾರ ಮೋಹನ್, ಜಿ.ಪಂ ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಕಾಂಗ್ರೆಸ್ ಮುಖಂಡ ಎಚ್.ಕೆ. ನಟೇಶ್ ಗೌಡ ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ, ಸದಸ್ಯರಾದ ಮಂಜುನಾಥ್ ಹಾಗೂ ಶಿವನಂಜಪ್ಪ ಮಾತುಕತೆ ನಡೆಸಿದರು. ಗ್ರಾಮಸ್ಥರ ವಿರೋಧ ಹಿನ್ನೆಲೆ ಬೀದಿನಾಯಿಗಳ ಆರೈಕೆ ಕೇಂದ್ರ ಸ್ಥಾಪನೆ ನಿರ್ಧಾರದ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮುಚ್ಚಿರುವ ಚರಂಡಿಯಿAದ ಗ್ರಾಮಸ್ಥರಿಗೆ ತೊಂದರೆ ಆಗಿದೆ. ಕೊಳಚೆ ನೀರು ಸರಾಗವಾಗಿ ಹೋಗಲು ಚರಂಡಿ ಇಲ್ಲದೆ ರಸ್ತೆಯ ಮೇಲೆ ಹರಿಯುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್‌ಗಳಾದ ಕಿರಣ್ ಕುಮಾರ್ ಹಾಗೂ ಸೌಮ್ಯ ಅವರು ಮುಚ್ಚಿರುವ ಗುಂಡಿ ತೆಗೆದು ಪೈಪ್ ಲೈನ್ ಅಳವಡಿಸುವ ಮೂಲಕ ಕೊಳಚೆ ನೀರು ಹರಿದು ಹೋಗುವಂತೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆಬಾರ್ಜ್ ರವರು ಹಕ್ಕೆ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭ ಎಚ್. ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಎ. ದಿನೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ. ತಾಲೂಕು ಅಧ್ಯಕ್ಷ ಶಿವ. ತಾಲೂಕು ಉಪಾಧ್ಯಕ್ಷ ಜಯರಾಜ್. ತಾಲೂಕು ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ. ಹಾಗೂ ಪದಾಧಿಕಾರಿಗಳು, ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಎಸ್. ವೆಂಕಟೇಶ್, ಗ್ರಾಮಸ್ಥರಾದ ಸಂಪತ್ತ್, ಲೋಕೇಶ್, ಕುಮಾರ, ತಮ್ಮಯ್ಯ, ದೇವು, ಚಂದ್ರ, ಪರಶಿವ, ಕೃಷ್ಣಪ್ಪ, ಮಂಜುನಾಥ ಸ್ವಾಮಿ, ರಾಜಪ್ಪ, ವಾರಿಜಾ, ಹಕೃತಿ, ಈಶ, ಪಾಪಣ್ಣ, ನಾಗರಾಜ್, ಲಿಂಗರಾಜ್ ಸತೀಶ್, ಜಯರಾಜ್, ಮೋನಿಶ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
- ಕೆ.ಕೆ. ನಾಗರಾಜಶೆಟ್ಟಿ.