ಸೋಮವಾರಪೇಟೆ, ಡಿ. ೧೭: ಸಮೀಪದ ಕಾಜೂರು ಮೀಸಲು ಅರಣ್ಯದಲ್ಲಿ ತೇಗದ ಮರಗಳನ್ನು ಕಡಿದು ಸಾಗಿಸುತ್ತಿದ್ದ ಮರಗಳ್ಳರ ಕೃತ್ಯವನ್ನು ಪತ್ತೆಹಚ್ಚುವಲ್ಲಿ ಸೋಮವಾರಪೇಟೆ ವಲಯ ಅರಣ್ಯ ಇಲಾಖಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಮರ ಸಹಿತ ಓರ್ವ ಆರೋಪಿ ಹಾಗೂ ವಾಹನವನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಸೋಮವಾರಪೇಟೆ ವಲಯದ ಹುದುಗೂರು ಶಾಖಾ ವ್ಯಾಪ್ತಿಯ ಐಗೂರು ಗ್ರಾಮದ ಕಾಜೂರು ಅರಣ್ಯ ಪ್ರದೇಶದಲ್ಲಿ ತೇಗದ ಮರಗಳನ್ನು ಕಡಿದು ನಾಟಾಗಳನ್ನಾಗಿ ಪರಿವರ್ತಿಸಿ ಮರದ ಮಿಲ್‌ಗೆ ಸಾಗಿಸಿ ಹಣ ಮಾಡುತ್ತಿದ್ದ ಖತರ್ನಾಕ್ ಮರಗಳ್ಳರ ಕೃತ್ಯವನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ತಡವಾಗಿಯಾದರೂ ಪತ್ತೆಹಚ್ಚಿದ್ದಾರೆ.
ಕಳೆದ ಶುಕ್ರವಾರದಂದು ರಾತ್ರಿ ೧೧ ಗಂಟೆಯ ಸುಮಾರಿಗೆ ಕಾಜೂರು ಅರಣ್ಯದಲ್ಲಿ ತೇಗದ ಮರದ ನಾಟಾಗಳನ್ನು ಬೊಲೆರೋ ಪಿಕಪ್ ವಾಹನಕ್ಕೆ ತುಂಬಿಸುತ್ತಿದ್ದ ಸಂದರ್ಭ ಅರಣ್ಯ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ಈ ಸಂದರ್ಭ ಆರೋಪಿಗಳು ಅರಣ್ಯ ಸಿಬ್ಬಂದಿಗಳ ಮೇಲೆ ಪ್ರತಿಧಾಳಿಗೆ ಪ್ರಯತ್ನಿಸಿದ ಸಂದರ್ಭ, ಆತ್ಮರಕ್ಷಣೆಗಾಗಿ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಕಾರ್ಯಾಚರಣೆ ಸಂದರ್ಭ ಯಡವಾರೆ ಗ್ರಾಮದ ಬಿ.ಜೆ.ಸಂತೋಷ್ ಎಂಬ ಆರೋಪಿಯನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತರ ಆರೋಪಿಗಳಾದ ಯಡವಾರೆ ಗ್ರಾಮದ ಬಿ.ಆರ್.ಅಶ್ವಥ್, ಬಿ.ವಿ.ನಿತೀನ್, ಕೊಡ್ಲಿಪೇಟೆ ಅರಕನಹಳ್ಳಿಯ ಸಯ್ಯದ್ ಜಹೀರ್, ಕುಶಾಲನಗರ ರಸಲ್‌ಪುರದ ವಿ.ಎಂ.ಷರೀಪ್, ಐಗೂರು ಗ್ರಾಮದ ಅಕ್ಷಯ್ ನಾಪತ್ತೆಯಾಗಿದ್ದಾರೆ.
ಮೀಸಲು ಅರಣ್ಯದಿಂದ ಒಟ್ಟಾರೆಯಾಗಿ ೭ ಮರಗಳನ್ನು ಕಡಿಯಲಾಗಿದ್ದು, ಇದರಲ್ಲಿ ೨ ಮರಗಳನ್ನು ಮಿಲ್‌ಗೆ ಸಾಗಾಟ ಮಾಡಲಾಗಿದೆ. ಉಳಿದ ೫ ಮರಗಳನ್ನು ನಾಟಾಗಳನ್ನಾಗಿಸಿ ಸಾಗಾಟ ಮಾಡುತ್ತಿದ್ದ ಸಂದರ್ಭ ನಡೆದ ಕಾರ್ಯಾಚರಣೆಯಲ್ಲಿ ವಾಹನ ಸಹಿತ ತೇಗದ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂದಿಸಲು ಆರ್‌ಎಫ್‌ಓ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಇಂದು ಘಟನಾ ಸ್ಥಳಕ್ಕೆ ಸಿಸಿಎಫ್ ಸೋನಾಲ್, ಡಿಎಫ್‌ಓ ಅಭಿಷೇಕ್, ಎಸಿಎಫ್ ಎ.ಎ.ಗೋಪಾಲ್, ಅರಣ್ಯ ಸಂಚಾರಿ ದಳದ ಎಸಿಎಫ್ ಗಾನಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್‌ಎಫ್‌ಓ ಶೈಲೇಂದ್ರ ಕುಮಾರ್, ಡಿಆರ್‌ಎಫ್‌ಓ ಚಂದ್ರೇಶ್, ಸಿಬ್ಬಂದಿಗಳಾದ ಚಂದ್ರಶೇಖರ್, ರವಿಕುಮಾರ್, ಅಂತೋಣಿ, ದಿವಾಕರ್, ಸಚಿನ್, ಅಯ್ಯಪ್ಪ, ಜೀವನ್, ಪ್ರಜ್ವಲ್, ಆನೆ ಕಾರ್ಯಪಡೆಯ ಸಿಬ್ಬಂದಿಗಳು ಭಾಗವಹಿಸಿದ್ದರು.