ಸೋಮವಾರಪೇಟೆ, ಡಿ. ೧೭: ಪಟ್ಟಣ ಸಮೀಪದ ಆಲೇಕಟ್ಟೆಯಿಂದ-ಕೂತಿ ಸಮೀಪದ ಇನಕನಹಳ್ಳಿವರೆಗಿನ ರಾಜ್ಯ ಹೆದ್ದಾರಿ (ಮಾಗಡಿ-ಜಾಲ್ಸೂರ್ ಎಸ್.ಎಚ್.-೮೫) ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದ ಕೂತಿ ಗ್ರಾಮಸ್ಥರು, ಅಧಿಕಾರಿಯನ್ನು ರಸ್ತೆ ಮಧ್ಯೆ ತಡೆದು ತರಾಟೆಗೆತ್ತಿಕೊಂಡರು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮೂಲಕ ೨೦ ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ೧೦ ಕಿಲೋಮೀಟರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದ ಕೂತಿ ಗ್ರಾಮಸ್ಥರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ರಸ್ತೆಯಲ್ಲಿ ತರಾಟೆಗೆ ತೆಗೆದುಕೊಂಡುರು.
ಕೂಡುರಸ್ತೆ, ಕಲ್ಕಂದೂರು, ಹೊಸಬೀಡು, ಕೂತಿ ಮಾರ್ಗವಾಗಿ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷ ಆಗುತ್ತಾ ಬಂದರೂ ಇನ್ನು ಪೂರ್ಣಗೊಂಡಿಲ್ಲ. ಕಾಮಗಾರಿಯ ಭೂಮಿ ಪೂಜೆಗೆ ಬಂದ ಗುತ್ತಿಗೆದಾರ ನಂತರ ಈ ಕಡೆ ತಿರುಗಿ ನೋಡಿಲ್ಲ. ಈ ಭಾಗದ ಎಲ್ಲಾ ಗ್ರಾಮದ ಗ್ರಾಮಸ್ಥರುಗಳು ಕಾಮಗಾರಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಆದರೂ ಗುಣಮಟ್ಟದ ಕೆಲಸ ನಡೆಯುತ್ತಿಲ್ಲ ಎಂದು ಗ್ರಾಮದ ಉಪಾಧ್ಯಕ್ಷ ಕೆ.ಡಿ. ಗಿರೀಶ್ ದೂರಿದರು.
ಗ್ರಾಮದ ಪ್ರಮುಖರಾದ ದಿವಾಕರ್ ಮಾತನಾಡಿ, ಗುತ್ತಿಗೆದಾರರ ಜೊತೆಗೆ ಸ್ಥಳೀಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವ ಸಂಶಯ ಇದೆ. ಕಳಪೆ ಕಾಮಗಾರಿಯ ಬಗ್ಗೆ ಅನೇಕ ಬಾರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಕಲ್ಲು ಕೋರೆಗಳಲ್ಲಿ ಸಿಗುವ ನಿರುಪಯುಕ್ತ ಜಲ್ಲಿ ಪುಡಿಯನ್ನೇ ವೆಟ್ಮಿಕ್ಸ್ ಎಂದು ನಂಬಿಸಿ ರಸ್ತೆಗೆ ಹಾಕುತ್ತಿದ್ದಾರೆ. ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳು, ಮರಗಳನ್ನು ತೆರವುಗೊಳಿಸಿಲ್ಲ. ಇದರೊಂದಿಗೆ ರಸ್ತೆಯ ಅಗಲೀಕರಣವೂ ಆಗಿಲ್ಲ ಎಂದು ಪತ್ರಿಕೆಯೊಂದಿಗೆ ದೂರಿದರು.
ಒಟ್ಟಾರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಕಳಪೆ ಕಾಮಗಾರಿ ನಡೆಯುತ್ತಿದೆ. ಸರ್ಕಾರಿ ಅನುದಾನದಡಿ ನಡೆಯುವ ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದೇ ಹೋದಲ್ಲಿ, ಮುಂದಿನ ದಿನಗಳಲ್ಲಿ ಕಾಮಗಾರಿಗೆ ತಡೆಯೊಡ್ಡಲಾಗುವುದು. ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್, ಅಭಿಯಂತರ ಅರ್ಬಾಜ್ ಅವರುಗಳಿಗೆ ಎಚ್ಚರಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಜಯರಾಮ್, ದಿನೇಶ್, ಯಾದವ್, ಲಕ್ಷö್ಮಣ್, ಸಂಜು, ಮೋಹನ್, ರಾಜಗೋಪಾಲ್ ಸೇರಿದಂತೆ ಇತರರು ಇದ್ದರು.