ಮಡಿಕೇರಿ, ಡಿ. ೧೮: ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮಡಿಕೇರಿಗೆ ಪ್ರವಾಸಿ ವಾಹನಗಳು ಬರಲು ಹಿಂದೇಟು ಹಾಕುತ್ತಿವೆ.! ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಆಗಮಿಸಿದ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಇದನ್ನು ಸಾಬೀತುಪಡಿಸಿದೆ.

ಹೌದು.. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಾಹನ ನಿಲುಗಡೆಗೆ ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿರುವ ಕಾರಣದಿಂದ ಪ್ರವಾಸಿ ವಾಹನಗಳ ಚಾಲಕರು ಮಡಿಕೇರಿ ನಗರಕ್ಕೆ ಬರಲು ನಿರಾಕರಿಸುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ.

ನಗರದ ಪ್ರಮುಖ ವಾಹನ ನಿಲುಗಡೆ ಸ್ಥಳವಾದ ರಾಜಾಸೀಟ್ ರಸ್ತೆ ಸೇರಿದಂತೆ ಮುಖ್ಯಬೀದಿ, ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ ಮಾಡಲು ಸಾಧ್ಯವಾಗದಂತ ಸನ್ನಿವೇಶ ಇರುವ ಕಾರಣದಿಂದ ಚಾಲಕರು ಬೇಸತ್ತು ಮಡಿಕೇರಿಗೆ ಬರಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ಮೊದಲು ಗಾಂಧಿ ಮೈದಾನದ ಒಳ ಭಾಗದಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡಲಾಗುತ್ತಿತ್ತು. ಅಲ್ಲಿ ೪೦ ಬಸ್ ನಿಲುಗಡೆ ಮಾಡುವ ಅವಕಾಶವೂ ಇತ್ತು. ಇದೀಗ ಈ ಜಾಗದಲ್ಲಿ ವಾಹನ ನಿಲುಗಡೆಗೆ ನಿರ್ಬಂಧವೇರಿರುವ ಪರಿಣಾಮ ಬಸ್ ಸೇರಿದಂತೆ ಇತರೆ ವಾಹನಗಳ ನಿಲುಗಡೆ ಕಷ್ಟ ಸಾಧ್ಯ ಎಂಬAತಾಗಿದೆ.

ಗಣನೀಯ ಕುಸಿತ

ಕಳೆದ ವರ್ಷ ಮಡಿಕೇರಿ ನಗರದಲ್ಲಿ ಬೆಳಿಗ್ಗೆ ೮ ಗಂಟೆಯಿAದ ರಾತ್ರಿ ೮ ಗಂಟೆ ಅವಧಿಯಲ್ಲಿ ಸರಾಸರಿ ೧೫ ಸಾವಿರ ವಾಹನಗಳು ನಿಲುಗಡೆಯಾಗುತ್ತಿದ್ದವು. ಈ ವರ್ಷ ಅದು ೬ ರಿಂದ ೭ ಸಾವಿರಕ್ಕೆ ಇಳಿಕೆಯಾಗಿದೆ. ಇದಕ್ಕೆ ಸೂಕ್ತ ವಾಹನ ಪಾರ್ಕಿಂಗ್‌ಗೆ ಸ್ಥಳವಿಲ್ಲದಿರುವುದು ಬಹುದೊಡ್ಡ ಕಾರಣವಾಗಿದೆ ಎಂದು ಪೊಲೀಸ್ ಇಲಾಖೆಗೆ ತಿಳಿದು ಬಂದಿದೆ. ದಸರಾ ಸಂದರ್ಭದಲ್ಲಿ ವಾಹನ ದಟ್ಟಣೆ ನಿಯಂತ್ರಣ ಮಾಡುವುದು ಪೊಲೀಸ್ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಆದರೆ, ಈ ವರ್ಷ ಗಣನೀಯ ಸಂಖ್ಯೆಯಲ್ಲಿ ವಾಹನ ಸಂಖ್ಯೆ ಇಳಿಮುಖವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

ಪಾರ್ಕಿಂಗ್ ಜಾಗದ ಕೊರತೆ

ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆಗೆ ಜಾಗದ ಕೊರತೆ ಇರುವ ಕಾರಣದಿಂದ ಪ್ರವಾಸಿ ಬಸ್ ಹಾಗೂ ವಾಹನ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಚಾಲಕರು ಮಡಿಕೇರಿಗೆ ಬರಲು ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ.

ಮಡಿಕೇರಿಗೆ ಪ್ರವಾಸಕ್ಕೆ ಬಂದರೂ ದೂರದಲ್ಲಿ ವಾಹನ ನಿಲ್ಲಿಸಬೇಕಾಗುತ್ತದೆ. ಇದರಿಂದ ಪ್ರವಾಸಿಗರನ್ನು ಸುತ್ತಾಡಿಸಲು ಕಷ್ಟವಾಗುತ್ತದೆ ಎಂಬ ದೂರುಗಳು ಚಾಲಕರಿಂದ ವ್ಯಕ್ತವಾಗುತ್ತಿವೆೆ. ಪ್ರವಾಸಿಗರನ್ನು ಪ್ರವಾಸಿ ತಾಣದತ್ತ ಬಿಟ್ಟುಹೋದ ನಂತರ ಸುತ್ತಿ ಬಳಸಿಕೊಂಡು ಅವರನ್ನು ಕರೆದೊಯ್ಯಬೇಕಾಗುತ್ತದೆ. ಬಸ್‌ನಂತಹ ಭಾರಿ ವಾಹನಗಳನ್ನು ತಿರುಗಿಸುವುದು ಕೂಡ ಕಷ್ಟವಾಗುತ್ತಿದೆ. ಈ ರೀತಿಯ ಸಮಸ್ಯೆಗಳಿಂದ ಚಾಲಕರು ಮಡಿಕೇರಿಗೆ ಬರಲು ಹಿಂದೇಟು ಹಾಕಲು ಒಂದು ಕಾರಣವಾಗಿದೆ.

ಕೇವಲ ಪ್ರವಾಸಿ ತಾಣ ಮಾತ್ರವಲ್ಲ, ಹೊಟೇಲ್‌ಗಳಿಗೆ ತೆರಳಿದ ಸಂದರ್ಭವೂ ಪಾರ್ಕಿಂಗ್‌ಗೆ ಪರದಾಡಬೇಕಾದ ಸನ್ನಿವೇಶ ತಲೆದೋರುವ ಕಾರಣದಿಂದ ಮಡಿಕೇರಿಗೆ ಬರುವ ವಾಹನ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಸಂಚಾರಿ ವಿಭಾಗದ ಉಪನಿರೀಕ್ಷಕ ಶ್ರೀಧರ್ ಮಾಹಿತಿ ನೀಡಿದ್ದಾರೆ.