ಮಡಿಕೇರಿ, ಡಿ. ೧೮ : ಮಡಿಕೇರಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯನ್ನು ವಿಸರ್ಜನೆ ಮಾಡುವಂತೆ ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಮೋಹನ್ ಮೌರ್ಯ ಮಡಿಕೇರಿಯ ಸುದರ್ಶನ ವೃತ್ತದ ಬಳಿ ಇರುವ ಅಂಬೇಡ್ಕರ್ ಭವನದ ಈ ಹಿಂದಿನ ಸಮಿತಿಯನ್ನು ವಿಸರ್ಜನೆ ಮಾಡಿ ಕೆಲವೇ ಕೆಲವು ಮಂದಿಯ ಸಮಿತಿಯನ್ನು ರಚನೆ ಮಾಡಿಕೊಂಡು ಏಕ ಪಕ್ಷೀಯವಾಗಿ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಸಮಿತಿಯಲ್ಲಿ ಯಾವದೇ ಲೆಕ್ಕ ಪತ್ರದ ನಿರ್ವಹಣೆ ಇರುವದಿಲ್ಲ. ಈ ಬಗ್ಗೆ ಹೋರಾಟ ಸಮಿತಿಯಿಂದ ಹಲವು ಹೋರಾಟಗಳನ್ನು ಮಾಡಿ ಜಿಲ್ಲಾಡಳಿತಕ್ಕೆ ಮನವಿ ಕೂಡ ಸಲ್ಲಿಸಲಾಗಿತ್ತು. ಅಲ್ಲದೆ, ಈ ಬಗ್ಗೆ ಅಶೋಕಪುರದ ಸುಮಾರು ೩೮ ಮಂದಿ ಸಹಿ ಮಾಡಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು; ಸಮಿತಿಯಲ್ಲಿ ಲೋಪವಾಗಿದೆಯೆಂದು ಉಲ್ಲೇಖಿಸಿ ಸಮಿತಿಯನ್ನು ವಿಸರ್ಜನೆ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಹಕಾರ ಸಂಘಗಳ ಉಪನಿಬಂಧಕರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಮಿತಿಯನ್ನು ವಿಸರ್ಜನೆ ಮಾಡಿ ನಿಯಮಾನುಸಾರ ನೂತನ ಸಮಿತಿ ರಚನೆಯಾಗಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಆದೇಶದಲ್ಲಿ ಕರ್ನಾಟಕ ಸಂಘಗಳ ಅಧಿನಿಯಮ ೧೯೬೦ ಕಲಂ ೨೫ರನ್ವಯ ಸಮಿತಿಯು ಕಾಯ್ದೆಯನ್ವಯ ಕ್ರಮಬದ್ಧವಾಗಿ ಕಾರ್ಯನಿರ್ವಹಿಸದೇ ಇರವುದು, ಕಾಲ ಕಾಲಕ್ಕೆ ಲೆಕ್ಕಪತ್ರ ತಪಾಸಣೆ ಮಾಡಿಸದೇ ಇರುವದು, ಸಂಘದ ಕಾಯ್ದೆಯನ್ವಯ ಕಾಲ ಕಾಲಕ್ಕೆ ಚುನಾವಣೆ ನಡೆಸದೇ ಇರುವದು ವಿಚಾರಣಾ ವರದಿಯಿಂದ ಕಂಡುಬAದಿರುತ್ತದೆ, ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಗಳ ಅಧಿನಿಯಮ ೧೯೬೦ ಸೆಕ್ಷನ್ ೨೬ರನ್ವಯ ಕಲಂ ೨೭ಎ ರಂತೆ ಕೂಡಲೇ ಸಮಿತಿಯ ಆಡಳಿತ ಮಂಡಳಿಯನ್ನು ನಿಯಮಾನುಸಾರ ಅಮಾನತ್ತಿನಲ್ಲಿರಿಸಿ ಅಥವಾ ವಿಸರ್ಜಿಸಿ ಆಡಳಿತಾಧಿಕಾರಿಗಳನ್ನು ನೇಮಿಸುವ ಸಂಬAಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೂಡಲೇ ಕ್ರಮವಹಿಸಿ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಸಮಿತಿಯನ್ನು ಅಮಾನತ್ತುಪಡಿಸಲಾಗಿದ್ದರೂ ದುಬಾರಿ ಬಾಡಿಗೆಗೆ ಭವನವನ್ನು ಕಾರ್ಯಕ್ರಮಗಳಿಗೆ ನೀಡಲಾಗುತ್ತಿದೆ. ಇದು ಕಾನೂನು ಬಾಹಿರವಾಗಿದೆ. ಅಲ್ಲದೆ, ದೊಡ್ಡ ಮೊತ್ತದ ಬಾಡಿಗೆ ನೀಡಿ ಕಾರ್ಯಕ್ರಮ ಮಾಡಲು ಬಡವರ್ಗದವರಿಗೆ ಸಾಧ್ಯವಾಗುವದಿಲ್ಲ. ಹಾಗಾಗಿ ಸಮಿತಿ ವಿಸರ್ಜನೆ ಮಾಡಿ ನೂತನ ಸಮಿತಿ ರಚನೆ ಮಾಡಬೇಕು, ಸಮಿತಿಯಲ್ಲಿ ಎಲ್ಲರಿಗೂ ಅವಕಾಶ ಸಿಗುವಂತಾಗಬೇಕೆAದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಹೋರಾಟ ಸಮಿತಿಯ ಹೋರಾಟಕ್ಕೆ ಸಂದ ಜಯವಾಗಿದೆ. ಈ ಹೋರಾಟಕ್ಕೆ ದಲಿತ ಸಮುದಾಯದ ಎಲ್ಲ ೩೭ ಸಂಘಟನೆಗಳು ಸಹಕಾರ ನೀಡಿರುವದಾಗಿ ಅವರು ಸ್ಮರಿಸಿಕೊಂಡರು.

ಗೋಷ್ಠಿಯಲ್ಲಿ ಪ್ರಮುಖರುಗಳಾದ ಟಿ.ಎನ್. ಗೋವಿಂದಪ್ಪ, ಹೆಚ್.ಎಲ್.ದಿವಾಕರ್, ಜೆ.ಪಿ.ರಾಜು, ಪಿ.ಎಸ್. ಮುತ್ತ, ಪ್ರೇಮ ಕೃಷ್ಣಪ್ಪ ಇದ್ದರು.