ಸೋಮವಾರಪೇಟೆ, ಡಿ. ೧೮: ಹುದುಗೂರು ಶಾಖಾ ವ್ಯಾಪ್ತಿಗೆ ಒಳಪಡುವ ಕಾಜೂರು ಮೀಸಲು ಅರಣ್ಯದಲ್ಲಿ ತೇಗದ ಮರಗಳನ್ನು ಕಡಿದು ಸಾಗಿಸಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯದ ಬಗ್ಗೆಯೂ ಇಲಾಖಾ ಹಂತದಲ್ಲಿ ಆಂತರಿಕ ತನಿಖೆ ಶುರುವಾಗಿದೆ.
ಕಾಜೂರು ಮೀಸಲು ಅರಣ್ಯದಲ್ಲಿ ಭಾರೀ ಪ್ರಮಾಣದ ತೇಗದ ಮರಗಳು ನಾಪತ್ತೆಯಾಗಿದೆ ಎಂಬ ಸಂಶಯ ಒಂದೆಡೆಯಿದ್ದರೆ, ಮತ್ತೊಂದೆಡೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಮರ ಕಳ್ಳತನ ನಡೆದರೂ ಸ್ಥಳೀಯ ಅರಣ್ಯ ಇಲಾಖೆಯವರು ಏನು ಮಾಡುತ್ತಿದ್ದರು ಎಂಬ ಬಗ್ಗೆಯೂ ಸಂಶಗಳು ಮೂಡುತ್ತಿದೆ. ಇದರ ಸ್ಪಷ್ಟತೆಗಾಗಿ ಇದೀಗ ಅಧಿಕಾರಿ-ಸಿಬ್ಬಂದಿಗಳ ಕರ್ತವ್ಯದ ಬಗ್ಗೆ ಇಲಾಖಾ ಹಂತದಲ್ಲಿ ಆಂತರಿಕ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಶ್ನಿ ಅವರ ಆದೇಶದಂತೆ ವಿಜಿಲೆನ್ಸ್ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ ಅವರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಕಾಜೂರು ಮೀಸಲು ಅರಣ್ಯದಲ್ಲಿ ಹೊಸದಾಗಿ ೭ ತೇಗದ ಮರಗಳು ಕಳವು ಮಾಡುತ್ತಿದ್ದ ಸಂದರ್ಭ ಲಭಿಸಿದ ಮಾಹಿತಿಯಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಧಾಳಿ ನಡೆಸಿ, ಓರ್ವನನ್ನು ಬಂಧಿಸಿದ್ದರೆ, ಉಳಿದ ೫ ಮಂದಿ ತಲೆಮರೆಸಿಕೊಂಡಿದ್ದರು. ಒಟ್ಟು ೬ ಆರೋಪಿಗಳ ವಿರುದ್ಧ ಅರಣ್ಯ ಇಲಾಖಾಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಈ ಮಧ್ಯೆ ಇದೇ ಕಾಜೂರು ಅರಣ್ಯದೊಳಗೆ ೬ ತೇಗದ ಮರಗಳು ಈ ಹಿಂದೆಯೇ ಕಳ್ಳಸಾಗಣೆಯಾಗಿರುವ ಬಗ್ಗೆಯೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಈ ಮರಗಳನ್ನು ಯಾವಾಗ ಕಡಿದಿದ್ದಾರೆ? ಎಂಬ ಬಗ್ಗೆ ವೈಜ್ಞಾನಿಕ ಸ್ಪಷ್ಟನೆಗಾಗಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಈ ನಡುವೆ ಅರಣ್ಯ ರಕ್ಷಣೆಯ ಜವಾಬ್ದಾರಿಯನ್ನು ಸ್ಥಳೀಯ ಮಟ್ಟದಲ್ಲಿ ಹೊತ್ತಿರುವ ಫಾರೆಸ್ಟರ್, ಗಾರ್ಡ್ ಸೇರಿದಂತೆ ಇತರ ಸಿಬ್ಬಂದಿಗಳ ಕಾರ್ಯವೈಖರಿ ಹೇಗಿತ್ತು? ಎಂಬ ಬಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ ಅವರು ತನಿಖೆ ಕೈಗೊಂಡಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಹುದುಗೂರು ಹಾಗೂ ಮಾದಾಪುರ ಶಾಖೆಗಳು ಒಳಪಡುತ್ತಿದ್ದು, ಈ ಎರಡೂ ಶಾಖೆಗಳ ತಲಾ ಓರ್ವ ಫಾರೆಸ್ಟರ್, ಓರ್ವ ಗಾರ್ಡ್, ರ್ಯಾಪಿಡ್ ರೆಸ್ಪಾನ್ಸ್ ಟೀಂನ ನಾಲ್ಕು ಹಾಗೂ ಎಲಿಫೆಂಟ್ ಟಾರ್ಸ್ಕ್ ಫೋರ್ಸ್ನ ನಾಲ್ವರು ಸಿಬ್ಬಂದಿಗಳು ಸೇರಿದಂತೆ ಒಟ್ಟು ೧೨ ಮಂದಿಯ ವಿರುದ್ಧ ಇಲಾಖಾ ಮಟ್ಟದಲ್ಲಿ ಆಂತರಿಕ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಈ ಮಧ್ಯೆ ಮರಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದಡಿ ಯಡವಾರೆ ಗ್ರಾಮದ ಬಿ.ಜೆ. ಸಂತೋಷ್, ಬಿ.ಆರ್. ಅಶ್ವಥ್, ಬಿ.ವಿ. ನಿತೀನ್, ಕೊಡ್ಲಿಪೇಟೆ ಅರಕನಹಳ್ಳಿಯ ಸಯ್ಯದ್ ಜಹೀರ್, ಕುಶಾಲನಗರ ರಸಲ್ಪುರದ ವಿ.ಎಂ. ಷರೀಪ್, ಐಗೂರು ಗ್ರಾಮದ ಅಕ್ಷಯ್ ಅವರುಗಳ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಕಾರ್ಯಾಚರಣೆ ಸಂದರ್ಭ ಸಿಕ್ಕಿಬಿದ್ದ ಬಿ.ಜೆ. ಸಂತೋಷ್ ಸೇರಿದಂತೆ ಇತರ ಮೂವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮೊನ್ನೆ ಬೆಳಕಿಗೆ ಬಂದ ೭ ಮರಗಳ ಕಳವು ಪ್ರಕರಣಕ್ಕೆ ಸಂಬAಧಿಸಿದAತೆ ಈಗಾಗಲೇ ೨ ತೇಗದ ಮರಗಳನ್ನು ಕಳ್ಳರು ಸಾಗಾಟಗೊಳಿಸಿದ್ದು, ಇದನ್ನು ಪತ್ತೆಹಚ್ಚಲು ತನಿಖಾ ತಂಡ ಕಾರ್ಯಪ್ರವೃತ್ತವಾಗಿದೆ. ಇದಕ್ಕಾಗಿ ಹಾಸನ, ಮೈಸೂರು ಜಿಲ್ಲೆಗಳತ್ತ ತನಿಖೆ ಸಾಗಿದೆ. ಉಳಿದ ೫ ಮರಗಳ ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಕಳವು ಆಗಿರುವ ೬ ತೇಗದ ಮರಗಳ ಬಗ್ಗೆಯೂ ತನಿಖೆ ಮುಂದುವರೆದಿದೆ. ಮೀಸಲು ಅರಣ್ಯದಲ್ಲಿ ೧೩ ತೇಗದ ಮರಗಳು ಕಳ್ಳಸಾಗಾಣೆಯಾಗಿರುವುದು ಅರಣ್ಯ ರಕ್ಷಕರ ಕಾರ್ಯಕ್ಷಮತೆ, ಕರ್ತವ್ಯ ಪ್ರಜ್ಞೆಯನ್ನು ಸಂಶಯದಿAದ ನೋಡುವಂತೆ ಮಾಡಿದೆ. ಈ ಬಗೆಗಿನ ಸ್ಪಷ್ಟತೆಗಾಗಿ ಆಂತರಿಕ ತನಿಖೆ ಆರಂಭಗೊAಡಿದೆ ಎಂದು ತಿಳಿದುಬಂದಿದೆ.
-ವಿಜಯ್