ಮಡಿಕೇರಿ, ಡಿ. ೧೮: ಪತ್ನಿಯನ್ನು ಕೊಲೆಗೈಯಲು ಸುಪಾರಿ ನೀಡಿದ್ದ ಪತಿ ಸೇರಿದಂತೆ ಕೊಲೆ ಯತ್ನ ಮಾಡಿದ್ದ ವೀರಾಜಪೇಟೆ ಮೂಲದ ಇಬ್ಬರನ್ನು ಬಂಧಿಸುವಲ್ಲಿ ಮೈಸೂರಿನ ಮೇಟಗಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವೀರಾಜಪೇಟೆಯ ಬೋಯಿಕೇರಿ ನಿವಾಸಿಗಳಾದ ಭಾಸ್ಕರ್ ಹಾಗೂ ಅಭಿಷೇಕ್ ಸೇರಿದಂತೆ ಪತಿ ಮಹೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?

ಮೈಸೂರಿನ ಬಿಎಂಶ್ರೀ ನಗರದಲ್ಲಿ ಮಹೇಶ್ ಹಾಗೂ ನಾಗರತ್ನ ದಂಪತಿ ವಾಸವಿದ್ದು, ತಾ. ೧೬ರ ರಾತ್ರಿ ಮನೆಯಲ್ಲಿ ನಾಗರತ್ನ ಒಬ್ಬಂಟಿಯಾಗಿದ್ದ ಸಂದರ್ಭ ಅವರ ಮೇಲೆ ಹಲ್ಲೆ ನಡೆಸಿ, ಮನೆಗೆ ಬೆಂಕಿ ಹಚ್ಚಿದ್ದ ಘಟನೆ ನಡೆದಿತ್ತು.

ಮನೆಯ ಮೂರನೇ ಮಹಡಿಯಲ್ಲಿ ವಾಸವಿದ್ದ ನಾಗರತ್ನ ಅವರ ಮನೆಗೆ ರಾತ್ರಿ ೭ ಗಂಟೆ ಸುಮಾರಿಗೆ ನುಗ್ಗಿದ ಮುಸುಕುಧಾರಿಗಳು ಅವರ ಮೇಲೆ ಹಲ್ಲೆ ನಡೆಸಿ, ಮನೆಯ ಸಿಲಿಂಡರ್ ಸೋರಿಕೆ ಮಾಡಿ, ಬೆಂಕಿ ಹಚ್ಚಿದ್ದಲ್ಲದೆ ಪೆಟ್ರೋಲ್ ಸುರಿದು ಪರಾರಿಯಾಗಿದ್ದರು. ಕೃತ್ಯ ನಡೆಸಿ ದುಷ್ಕರ್ಮಿಗಳು ಓಡಿಹೋಗುವುದನ್ನು ಸ್ಥಳೀಯರು ಗಮನಿಸಿದ್ದರು. ತಕ್ಷಣ ನಾಗರತ್ನ ಮನೆಗೆ ತೆರಳಿದಾಗ ಮನೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು ಹಾಗೂ ಮಹಿಳೆಗೆ ಗಾಯವಾಗಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪತಿಯಿಂದ ಸುಪಾರಿ

ಪತ್ನಿ ನಾಗರತ್ನಳನ್ನು ಕೊಲೆಗೈಯಲು ಪತಿ ಮಹೇಶ್ ಸುಪಾರಿ ಕೊಟ್ಟಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ನಾಗರತ್ನ ಹಾಗೂ ಮಹೇಶ್ ಮೈಸೂರಿನಲ್ಲಿ ಪಾನಿಪುರಿ ತಯಾರಿಸುವ ತರಬೇತಿ ನೀಡುತ್ತಿದ್ದು, ಇಲ್ಲಿಗೆ ವೀರಾಜಪೇಟೆಯ ಬೋಯಿಕೇರಿಯ ಭಾಸ್ಕರ್ ಹಾಗೂ ಅಭಿಷೇಕ್ ಸೇರಿಕೊಂಡಿದ್ದರು. ಸಂಪಾದಿಸಿದ ಹಣವನ್ನು ಕಿತ್ತುಕೊಂಡು ಪತ್ನಿ ಬಡ್ಡಿ ವ್ಯವಹಾರ ಮಾಡುತ್ತಿರುವ ಬಗ್ಗೆ ಪತಿ ಮಹೇಶ್‌ಗೆ ತೀವ್ರ ಅಸಮಾಧಾನವಿತ್ತು. ಅಲ್ಲದೆ ಪತ್ನಿ ಕಿಂಚಿತ್ತು ಬೆಲೆ ನೀಡದಿರುವುದರಿಂದ ಬೇಸತ್ತ ಮಹೇಶ್ ಭಾಸ್ಕರ್ ಮತ್ತು ಅಭಿಷೇಕ್‌ಗೆ ರೂ. ೫ ಲಕ್ಷದ ಸುಪಾರಿ ನೀಡಿ ಹತ್ಯೆಗೆ ಸ್ಕೆಚ್ ರೂಪಿಸಿದ್ದರು.

ಹಲ್ಲೆಗೈದು ಕೊಲೆ ಮಾಡಿ ನಂತರ ಗ್ಯಾಸ್ ಸಿಲಿಂಡರ್ ಸೋರಿಕೆ ಮಾಡಿ ಸಾಕ್ಷö್ಯ ನಾಶಮಾಡುವ ಯೋಜನೆಯನ್ನು ಆರೋಪಿಗಳು ಮಾಡಿದ್ದರು.

ಈ ಕುರಿತು ತನಿಖೆ ನಡೆಸಿದ ಸಂದರ್ಭ ಮಹೇಶ್‌ನ ವರ್ತನೆ ಬಗ್ಗೆ ಅನುಮಾನಗೊಂಡು ವಿಚಾರಣೆ ನಡೆಸಿದ ಸಂದರ್ಭ ಸತ್ಯಾಂಶ ಬಯಲಾಗಿದೆ. ಈ ವೇಳೆ ಅಭಿಷೇಕ್ ಹಾಗೂ ಭಾಸ್ಕರ್ ಈ ಕೃತ್ಯವೆಸಗಿದ್ದಾರೆ ಎಂದು ಬಾಯ್ಬಿಟ್ಟಿದ್ದು, ಮೈಸೂರಿನ ರಿಂಗ್ ರೋಡ್‌ನ ಮನೆಯೊಂದರಲ್ಲಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.