ಕಣಿವೆ, ಡಿ. ೧೮ : ಅಲ್ಲೊಂದು ಮಕ್ಕಳಿಂದ ಮಕ್ಕಳಿಗಾಗಿಯೇ ಆಯೋಜನೆಗೊಂಡಿದ್ದ ವರ್ಣರಂಜಿತ ವೇದಿಕೆ. ಬಣ್ಣ ಬಣ್ಣದ ವೇಶ ಭೂಷಣಗಳೊಂದಿಗೆ ಪೋಷಕರು ಹಾಗೂ ಶಿಕ್ಷಕರಿಂದ ಶೃಂಗರಿಸಿಕೊAಡು ಬಂದಿದ್ದ ಚಿಣ್ಣರು... ಮಕ್ಕಳ ಪ್ರದರ್ಶನವನ್ನು ನೋಡಿ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಕೆಲ ಪೋಷಕರು ಹಾಗೂ ಶಿಕ್ಷಕರು.

ಚಿಲಿ ಪಿಲಿ ಗುಟ್ಟುವ ಪಕ್ಷಿಗಳ ಮಾದರಿಯಲ್ಲಿ ಶಾಲಾ ಮೈದಾನದ ಸುತ್ತಲೂ ಕೇಳಿ ಬರುತ್ತಿದ್ದ ಮಕ್ಕಳ ಕಲರವ... ಇದಕ್ಕೆ ಸಾಕ್ಷಿಯಾಗಿದ್ದು ಸುಮಾರು ೧೫ ಕ್ಲಸ್ಟರ್‌ಗಳ ವ್ಯಾಪ್ತಿಯ ನೂರಾರು ಮಕ್ಕಳಿಗೆ ವೇದಿಕೆಯಾಗಿದ್ದ ಕುಶಾಲನಗರದ ಪಿಎಂಶ್ರೀ ಶಾಲಾವರಣ. ಬುಧವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಕಲೋತ್ಸವ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡು ಬಹುಮಾನ ಗೆಲ್ಲುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲು ಬಂದಿದ್ದ ಪುಟ್ಟ ಪುಟ್ಟ ಪೋರರಾದಿಯಾಗಿ ಪ್ರೌಢಶಾಲಾ ಮಕ್ಕಳು. ಕೇವಲ ಪಠ್ಯದಲ್ಲಿ ಓದಿದ್ದ ಸೌರಮಂಡಲದ ಗ್ರಹಗಳ ಬಗ್ಗೆ ಸೋಮವಾರಪೇಟೆ ಎಸ್ ಜೆ.ಎಂ. ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಚಂದನ್ ಒಂದು ಕಪ್ಪು ಕೊಡೆಯನ್ನು ಅಲಂಕರಿಸಿ ಅದರಲ್ಲಿ ಸೌರ ಮಂಡಲದ ಚಿತ್ರ ಬಿಡಿಸಿ ಗ್ರಹಗಳ ಮಾದರಿಯ ಗಮನ ಸೆಳೆದರೆ, ಶಿರಂಗಾಲದ ಸ್ವಾಮಿ ವಿವೇಕಾನಂದ ಶಾಲೆಯ ಎರಡನೇ ತರಗತಿ ಪೋರ ನಿಶಾಂತ್ ಜಂಕ್ ಪುಡ್ ಗಳನ್ನು ತಿನ್ನಬೇಡಿ, ಗುಟ್ಕಾ ತಿಂದು ದಾರಿ ಯಲ್ಲಿ ಉಗುಳಬೇಡಿ. ಆರೋಗ್ಯದಾಯಕ ಪೌಷ್ಟಿಕಾಂಶ ಗಳುಳ್ಳ ತಿನಿಸುಗಳನ್ನು ತಿನ್ನಿರಿ ಎಂಬ ಸಂದೇಶ ಸಾರುವ ಚಿತ್ರ ನೋಡುಗರ ಗಮನ ಸೆಳೆಯಿತು. ಹಾಗೆಯೇ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳಿಂದ ಸಾಮೂಹಿಕ ನೃತ್ಯ, ಭಜನೆ, ಭಾಷಣ, ಪ್ರಾರ್ಥನೆ, ಛದ್ಮವೇಶ, ಚಿತ್ರಕಲೆ, ರಂಗೋಲಿ, ಏಕಪಾತ್ರ ಅಭಿನಯ, ಜಾನಪದ ಗೀತೆ, ಧಾರ್ಮಿಕ ಪಠಣ, ಆಶುಭಾಷಣ, ಪ್ರಬಂಧ ಸೇರಿದಂತೆ ಎಲ್ಲಾ ಪ್ರಾಕಾರಗಳು ಮೂಡಿ ಬಂದವು.

ಕಾರ್ಯಕ್ರಮಕ್ಕೂ ಮುನ್ನಾ ನಡೆದ ಸಭಾ ಕಾರ್ಯಕ್ರಮ ವನ್ನು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ನಾನಾ ಕಲಾ ಪ್ರಾಕಾರಗಳು ಹಾಗೂ ಪ್ರತಿಭೆಗಳನ್ನು ಹೊರ ತರುವಲ್ಲಿ ಹಾಗೂ ಸೂಕ್ತ ವೇದಿಕೆ ನೀಡುವಲ್ಲಿ ಪ್ರತಿಭಾ ಕಲೋತ್ಸವ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಅಭ್ಯುದಯಕ್ಕಾಗಿ ಶ್ರಮಿಸುವ ಶಿಕ್ಷಕ ಸಮೂಹದ ಶ್ರಮ ಶ್ಲಾಘನೀಯವಾದುದು. ವಿದ್ಯಾರ್ಥಿಗಳು ಕೇವಲ ಕಲಿಕೆಯಲ್ಲಿ ತಲ್ಲೀನರಾಗದೇ ಕಲೆ, ಸಾಹಿತ್ಯ, ಸಂಸ್ಕೃತಿಗಳತ್ತ ಒತ್ತು ನೀಡುವ ಕೆಲಸವಾಗಬೇಕಿದೆ. ಅದಕ್ಕಾಗಿ ಇಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕೆಂದು ಕರೆಕೊಟ್ಟರು.

ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ ನಾಡಿನ ನಾಳೆಯ ಕಲೆ ಹಾಗೂ ಸಂಸ್ಕೃತಿಗಳ ರಾಯಭಾರಿಗಳಾದ ಇಂದಿನ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಗಳನ್ನು ಪೋಷಿಸಿ ಅವರನ್ನು ಉತ್ತೇಜಿಸುವ ಕೆಲಸಕ್ಕೆ ಶಿಕ್ಷಣ ಇಲಾಖೆ ಸದಾ ಕಟಿಬದ್ಧವಾಗಿದೆ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಸಕ್ರಿಯ ವಾಗಿ ಭಾಗವಹಿಸುವ ಮೂಲಕ ಕಲಾ ಪ್ರಾಕಾರಗಳನ್ನು ಪ್ರದರ್ಶಿಸುವ ಮೂಲಕ ಉತ್ತಮ ಭವಿಷ್ಯವನ್ನು ಕಂಡು ಕೊಳ್ಳಲು ಕರೆಕೊಟ್ಟರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದನಕುಮಾರ್ ಹಾಗೂ ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿದರು. ಕುಶಾಲನಗರ ಪಿಎಂಶ್ರೀ ಶಾಲೆಯ ಮುಖ್ಯ ಶಿಕ್ಷಕ ಸಣ್ಣಸ್ವಾಮಿ, ಶಿಕ್ಷಕರ ಸಂಘದ ಕುಶಾಲನಗರ ತಾಲೂಕು ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಕವಿತಾ, ಮಹೇಂದ್ರಕುಮಾರ್, ಸುಜಾತ, ಸುರೇಶ, ನವೀನ್, ಅನುದಾನಿತ ಶಾಲೆಗಳ ಸಂಘದ ಕಾರ್ಯದರ್ಶಿ ಎಸ್.ನಾಗರಾಜು, ಶಿಕ್ಷಕರ ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳಾದ. ಟಿ.ವಿ. ಶೈಲಾ, ಸೌಭಾಗ್ಯ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಯಶವಂತ ಕುಮಾರ್ ಶಶಿಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ. ಮಂಜೇಶ್, ಕುಶಾಲನಗರ ಸಿಆರ್‌ಪಿ ವಿಶ್ವನಾಥ್ ಸ್ವಾಗತಿಸಿದರು. ಕೂಡಿಗೆ ಸಿ ಆರ್ ಪಿ ಶಾಂತಕುಮಾರ್ ವಂದಿಸಿದರು.