ವೀರಾಜಪೇಟೆ, ಡಿ. ೧೮: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ನೀರುಗಂಟಿಗಳು, ಜವಾನರನ್ನು ಸರಕಾರಿ ನೌಕರರೆಂದು ಘೋಷಿಸಬೇಕು. ಬೆಲೆ ಏರಿಕೆ ಆಧಾರದಲ್ಲಿ ಕನಿಷ್ಟ ವೇತನ ರೂ. ೩೬,೦೦೦ ನಿಗದಿ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. ೨೦ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಆರ್ ಭರತ್ ಹೇಳಿದರು.
ವೀರಾಜಪೇಟೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಭರತ್ ಅವರು, ಇಡೀ ರಾಜ್ಯದಲ್ಲಿ ಸುಮಾರು ೬೩,೦೦೦ ಮಂದಿ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳಲ್ಲಿ ನೌಕರರಾಗಿ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಕಡಿಮೆ ವೇತನದಲ್ಲಿ ದುಡಿಯುತ್ತಿರುವ ನೌಕರರ ಬೇಡಿಕೆ ಈಡೇರಿಸಬೇಕು ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವುದರಿಂದ ದುಡಿಯುವ ವರ್ಗ ಸಂಕಷ್ಟದಲ್ಲಿದೆ. ಸಮಸ್ಯೆಗಳ ಪರಿಹಾರ ಹಾಗೂ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪದಾಧಿಕಾರಿ ಹೆಚ್ ಬಿ ಹರೀಶ್, ಪ್ರಧಾನ ಕಾರ್ಯದರ್ಶಿ ಮಧುಸೂದನ್, ಸಹ ಕಾರ್ಯದರ್ಶಿಗಳಾದ ದಿಲೀಪ್, ವಿಂದ್ಯಾ, ಉಪಾಧ್ಯಕ್ಷ ಮಹಾದೇವ, ರಂಗಸ್ವಾಮಿ ಇನ್ನಿತರರು ಇದ್ದರು.