ಚೆಯ್ಯಂಡಾಣೆ, ಡಿ. ೧೯: ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿ, ಸಾಂಸ್ಕೃತಿಕ ಬಾಂಧವ್ಯ ಹಾಗೂ ಸಾಮಾಜಿಕ ಏಕತೆಯನ್ನು ಗುರಿಯಾಗಿಟ್ಟುಕೊಂಡು ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಕೆಎಸ್ ಡಬ್ಲ್ಯೂಎ) ಯುಎಇ ವತಿಯಿಂದ ಆಯೋಜಿಸಲಾಗುತ್ತಿರುವ “ಕನೆಕ್ಟ್ ಕೊಡಗು ೨೦೨೬” ಕಾರ್ಯಕ್ರಮದ ಪೋಸ್ಟರ್ ಅನ್ನು ಸಂಘಟನೆಯ ಬೆಳ್ಳಿ ಹಬ್ಬದ ಪ್ರಯುಕ್ತ ದುಬೈ ದೇರಾದಲ್ಲಿರುವ ಕೇಂದ್ರ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಮಹತ್ವದ ಕಾರ್ಯಕ್ರಮವು ೨೦೨೬ರ ಫೆಬ್ರವರಿ ೮ ರಂದು ಶಾರ್ಜಾದಲ್ಲಿರುವ ಅಲ್ ಬತಾಯೆ ಗಾರ್ಡನ್‌ನಲ್ಲಿ ನಡೆಯಲಿದೆ. ದುಬೈಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪೋಸ್ಟರ್ ಬಿಡುಗಡೆಗೊಳಿಸಿ, ಕಾರ್ಯಕ್ರಮದ ಉದ್ದೇಶಗಳು ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಕೊಡಗು ಮೂಲದ ಅನಿವಾಸಿಗಳನ್ನು ಒಂದೇ ವೇದಿಕೆಗೆ ತಂದು ಸಾಮಾಜಿಕ, ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು, “ಕನೆಕ್ಟ್ ಕೊಡಗು ೨೦೨೬” ಕಾರ್ಯಕ್ರಮವು ಕೊಡಗು ಹಾಗೂ ವಿದೇಶದಲ್ಲಿರುವ ಕೊಡಗಿನವರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಸೇವಾ ಕಾರ್ಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಮಗ್ರ ಯೋಜನೆ ಹೊಂದಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಅಧ್ಯಕ್ಷ ಅಹ್ಮದ್ ಚಾಮಿಯಾಲ, ಕೊಡಗು ಕನೆಕ್ಟ್ ಕಾರ್ಯಕ್ರಮದ ಛೇರ್ಮನ್ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು, ವೆಲ್ಫೇರ್ ಜಿಸಿಸಿ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ, ಕಾರ್ಯಕ್ರಮದ ಕನ್ವೀನರ್ ರಿಯಾಝ್ ಕೊಂಡAಗೇರಿ, ಪ್ರಧಾನ ಕಾರ್ಯದರ್ಶಿ ಝುಬೈರ್ ಎಮ್ಮೆಮಾಡು, ಉಪಾಧ್ಯಕ್ಷರುಗಳಾದ ರಫೀಕ್ ಹಾಜಿ ಚಾಮಿಯಾಲ, ಆಲಿ ಎಮ್ಮೆಮಾಡು, ಸಂಯೋಜಕ ಇಸ್ಮಾಯಿಲ್ ಮೂರ್ನಾಡು, ಕಾರ್ಯದರ್ಶಿ ಮುಜೀಬ್ ಕಡಂಗ, ಸದಸ್ಯರಾದ ಹಾರಿಸ್ ಕೊಟ್ಟಮುಡಿ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಯುಎಇಯ ವಿವಿಧ ಎಮಿರೇಟ್ಸ್ಗಳಿಂದ ಆಗಮಿಸಿದ ಕೊಡಗು ಮೂಲದ ಅನಿವಾಸಿಗಳು ಉಪಸ್ಥಿತರಿದ್ದರು.