ಮಡಿಕೇರಿ, ಡಿ. ೧೯: ಮರಗೋಡಿನಲ್ಲಿ ಹಿಂದೂ ರುದ್ರಭೂಮಿ ಸ್ಥಾಪನ ಸಮಿತಿ ಹಾಗೂ ಮರಗೋಡು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ನಿರ್ಮಿಸಲಾದ ನೂತನ ಹಿಂದೂ ರುದ್ರ ಭೂಮಿಯನ್ನು ಅಧಿಕೃತವಾಗಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ.

ಗ್ರಾಮಸ್ಥರ ಹಲವು ವರ್ಷಗಳ ಕೋರಿಕೆಯ ಹಿನ್ನೆಲೆಯಲ್ಲಿ ಈ ಮಹತ್ವದ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈವರೆಗೆ ಅಂತ್ಯಸAಸ್ಕಾರ ನೆರವೇರಿಸಲು ಸಮರ್ಪಕ ಸ್ಥಳದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದ ಗ್ರಾಮಸ್ಥರಿಗೆ ಇದೀಗ ಶಾಶ್ವತ ಪರಿಹಾರ ದೊರೆತಿದೆ. ನೂತನ ರುದ್ರಭೂಮಿಯಲ್ಲಿ ಸಂಸ್ಕಾರ ವೇದಿಕೆ, ಮೂಲಭೂತ ಸೌಕರ್ಯ, ರಸ್ತೆ ಸಂಪರ್ಕ, ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆಯೂ ಇದೆ.

ಕಾರ್ಯಕ್ರಮದಲ್ಲಿ ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಹಿಂದೂ ರುದ್ರಭೂಮಿ ಸ್ಥಾಪನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಗಣ್ಯರು, ಗ್ರಾಮ ಪಂಚಾಯಿತಿ ಮತ್ತು ಸಮಿತಿಯ ಸಮನ್ವಯದಿಂದ ಸಮಾಜದ ಅಗತ್ಯಕ್ಕೆ ಸ್ಪಂದಿಸಿದ್ದು ಮಾದರಿ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಗ್ರಾಮ ಪಂಚಾಯಿತಿಯ ಮಾರ್ಗದರ್ಶನ, ಸಾರ್ವಜನಿಕರ ಸಹಕಾರ ಹಾಗೂ ದಾನಿಗಳ ನೆರವಿನಿಂದ ಈ ರುದ್ರಭೂಮಿ ನಿರ್ಮಾಣ ಸಾಧ್ಯವಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದರು. ನೂತನ ಹಿಂದೂ ರುದ್ರಭೂಮಿ ಆರಂಭವಾಗುವುದರಿAದ ಮರಗೋಡು ಮತ್ತು ಕಟ್ಟೆಮಾಡು ಗ್ರಾಮಗಳ ಹಿಂದೂ ಸಮುದಾಯದ ಜನತೆಗೆ ಮಹತ್ತರ ಅನುಕೂಲವಾಗಲಿದೆ.