ಮಡಿಕೇರಿ, ಡಿ. ೧೯ : ಕುಯ್ಯಂಗೇರಿ ನಾಡಿಗೆ ಒಳಪಟ್ಟ ಹೊದ್ದೂರು ಚೋರಂಗೆ ಮಾನಿ ಮಂದ್‌ನಲ್ಲಿ ಪುತ್ತರಿ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ಚೋರಂಗೆ ಮಂದ್‌ನಲ್ಲಿ ಈಶ್ವರನ ಪ್ರಾರ್ಥಿಸಿ ಮಂದ್ ತೊರ್‌ಪೊ ಕಾರ್ಯ ನಡೆಯಿತು. ಪುತ್ತರಿ ಹಬ್ಬದ ದಿನ ಸಂಜೆ ೫ ಗಂಟೆಗೆ ಎತ್ತ್ಪೋರಾಟದೊಂದಿಗೆ ಅಂದಿನ ಕಾಲಘಟ್ಟದಲ್ಲಿ ಗ್ರಾಮದ ಜನತೆಯನ್ನು ರಕ್ಷಿಸಿದ ದೇವರಾದ ಶ್ರೀ ಶಾಸ್ತ-ಈಶ್ವರನ ಸನ್ನಿಧಾನಕ್ಕೆ ಆಗಮಿಸಿ ಬಲಿಪೀಠದ ಮುಂಭಾಗದಲ್ಲಿ ಅಕ್ಕಿಯನ್ನು ಒಪ್ಪಿಸಿ, ದೇವರಿಗೆ ಗೌರವ ಅರ್ಪಣೆಯನ್ನು ಸಲ್ಲಿಸಿದರು. ಬಳಿಕ ಮಹಾಮಂಗಳಾರತಿ ಯೊಂದಿಗೆ ದೇವರಿಗೆ ನೈವೇದ್ಯ ಅರ್ಪಿಸಿ ಸಾಮೂಹಿಕವಾಗಿ ನಾಡಿನ ಜನತೆ ನೈವೇದ್ಯವನ್ನು ಸ್ವೀಕರಿಸಿದರು.

ಬಳಿಕ ಅಂದು ರಾತ್ರಿ ನಾಡೆನೆಲ್ಲೆಡೆ ಪುತ್ತರಿ ಹಬ್ಬದ ಪ್ರಯುಕ್ತ ಕುಟುಂಬಸ್ಥರೆಲ್ಲರೂ ಒಟ್ಟಾಗಿ ಐನ್‌ಮನೆಯಲ್ಲಿ ಸೇರಿ, ನೆಲ್ಲಕ್ಕಿ ನಡುಬಾಡೆಯಲ್ಲಿ ನೆರೆಕಟ್ಟಿ, ತಳಯತಕ್ಕಿ ಬೊಳಕ್‌ನೊಂದಿಗೆ ಕುಟುಂಬದ ಗದ್ದೆಗೆ ಒಡ್ಡೋಲಗ ದೊಂದಿಗೆ ತೆರಳಿ ಕದಿರು ತೆಗೆದು ನಾಡಿನ ದೇವಸ್ಥಾನಗಳಿಗೆ ತೆರಳಿ ಕದಿರು ಒಪ್ಪಿಸಿದರು. ಐನ್‌ಮನೆಗೆ ಆಗಮಿಸಿ ಏಳಕ್ಕಿಪುಟ್ಟ್ನೊಂದಿಗೆ ಸಾಮೂಹಿಕ ಭೋಜನ ಕಾರ್ಯ ನಡೆಸಲಾಯಿತು.

ನಾಡ್ ಮಂದ್‌ನಲ್ಲಿ ತುಂದುರಿಪಾಟ್ ನಡೆಯಿತು. ಬಳಿಕ ಶ್ರೀ ಭದ್ರಕಾಳಿ ದೇವರ ಸನ್ನಿಧಿಯಿಂದ ಬಾಳ್-ಭಂಡಾರವನ್ನು ಗ್ರಾಮಸ್ಥರೆಲ್ಲರೂ ಸೇರಿ ಒಡ್ಡೋಲಗದೊಂದಿಗೆ ಶ್ರೀ ಶಾಸ್ತ - ಈಶ್ವರನ ದೇವಸ್ಥಾನದ ಸನ್ನಿಧಾನಕ್ಕೆ ತಂದು ಬಲಿಪೀಠದಲ್ಲಿಟ್ಟು ಅರ್ಚಕರಿಂದ ಪೂಜೆ ಮಂಗಳಾರತಿ ಸಲ್ಲಿಸಿದ ಬಳಿಕ ವಾಪಾಸು ಮಂದ್‌ನಲ್ಲಿ ತಂದಿಡುವ ಸಂಪ್ರದಾಯ ನಡೆಯಿತು.

ಸಂಜೆ ಮಂದ್‌ನಲ್ಲಿ ನಾಡ್‌ಕೋಲ್, ದೇವಕೋಲ್, ಪರೆಯಕಳಿ ನಡೆದ ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ಶ್ರೀ ಶಾಸ್ತ - ಈಶ್ವರ ದೇವರು ಹಾಗೂ ನಾಡಿನ ಅಂಜಿತಲೆ ದೇವರನ್ನು ನೆನೆದು, ಪ್ರಾರ್ಥಿಸಿ ದೇವಕೋಲನ್ನು ಒಪ್ಪಿಸಿದರು.

ಈ ಸಂದರ್ಭ ಕುಯ್ಯಂಗೇರಿ ನಾಡಿಗೆ ಸೇರಿದ ಹೊದವಾಡ, ಹೊದ್ದೂರು ಗ್ರಾಮದ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಸಂಸ್ಕೃತಿಯ ಧಿರಿಸಿನೊಂದಿಗೆ ಭಾಗವಹಿಸಿದ್ದರು.