ಸೋಮವಾರಪೇಟೆ, ಡಿ. ೧೯: ವಿಶ್ವಮಾನವ ರಾಷ್ಟçಕವಿ ಕುವೆಂಪು ಅವರ ಜನ್ಮ ದಿನಾಚರಣೆ ತಾ. ೨೯ ರಂದು ನಡೆಯಲಿದ್ದು, ಅದರ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕುವೆಂಪು ವಿರಚಿತ ಗೀತಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಅವರು ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಮಾತೃಭಾಷೆಯಾದ ಕನ್ನಡವನ್ನು ದೈನಂದಿನ ಬದುಕಿನಲ್ಲಿ ಮಾತನಾಡುವ ಮೂಲಕವೇ ಕನ್ನಡವನ್ನು ಉಳಿಸಬಹುದು ಎಂದು ಅಭಿಪ್ರಾಯಪಟ್ಟರು. ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದು ದುರಂತದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಇಂಗ್ಲಿಷ್ ಮತ್ತು ಇತರೆ ಭಾಷೆಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕನ್ನಡ ಬಳಕೆಯು ಕುಂಠಿತವಾಗುತ್ತಿರುವುದು ಗಮನಾರ್ಹವಾಗಿದೆ. ಶಿಕ್ಷಣ, ಆಡಳಿತ, ವ್ಯಾಪಾರ ಮತ್ತು ಮನೆಮಾತಿನಲ್ಲಿಯೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಕನ್ನಡಿಗನು ತನ್ನ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಕನ್ನಡ ಮಾತನಾಡುವುದನ್ನು ಗೌರವದ ಸಂಕೇತವಾಗಿ ಪರಿಗಣಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಎ.ಪಿ. ವೀರರಾಜು, ಖಜಾಂಚಿ ಕೆ.ಪಿ. ದಿನೇಶ್, ಮಾಜಿ ಅಧ್ಯಕ್ಷ ಹೆಚ್.ಜೆ. ಜವರಪ್ಪ, ಶಾಂತಳ್ಳಿ ಹೋಬಳಿ ಅಧ್ಯಕ್ಷ ಸಿ.ಎಸ್. ನಾಗರಾಜು ಇದ್ದರು.

ಸೋಮವಾರಪೇಟೆಯ ೨೦ಕ್ಕೂ ಅಧಿಕ ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟçಕವಿ ಕುವೆಂಪು ಅವರು ರಚಿಸಿರುವ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.