ಮಡಿಕೇರಿ, ಡಿ. ೧೯: ನಗರದ ಮಯೂರ ವ್ಯಾಲಿ ಸಭಾಂಗಣದಲ್ಲಿ ಕೊಡಗು ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷ ಝರು ಗಣಪತಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಯಂ.ಓ. ದಾಮೋದರ್, ಒಕ್ಕೂಟದ ಕಾನೂನು ಸಲಹೆಗಾರ ಎಂ.ಎಸ್. ಪೂವಯ್ಯ ಹಾಗೂ ಜಿಲ್ಲೆಯ ಎಲ್ಲಾ ಖಾಸಗಿ ವಿದ್ಯಾಸಂಸ್ಥೆಗಳ ಸಂಸ್ಥಾಪಕರು ಹಾಜರಿದ್ದರು. ಸಭೆಯಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಕೆಲವು ಸುತ್ತೋಲೆಗಳಿಂದ ಖಾಸಗಿ ಶಾಲೆಗಳಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಚರ್ಚಿಸಲಾಯಿತು. ಜಿಲ್ಲೆಯ ಶಾಸಕರ ಮುಖಾಂತರ ಖಾಸಗಿ ಶಾಲೆಗಳ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಹಂತದಲ್ಲಿ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ತಿಮ್ಮಯ್ಯ ಕೋಟ್ರಂಗಡ ಅವಿರೋಧ ವಾಗಿ ಆಯ್ಕೆಯಾದರು. ಮಣಿ ಮೊಹಮ್ಮದ್ ಉಪಾಧ್ಯಕ್ಷರಾಗಿ, ಲಿಕಿತ್ ದಾಮೋದರ್ ಪ್ರಧಾನ ಕಾರ್ಯದರ್ಶಿಯಾಗಿ, ಎಂ.ಎಸ್. ಪೂವಯ್ಯ ಕಾನೂನು ಸಲಹೆಗಾರರಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜು ಎನ್.ಡಿ., ಸಚಿನ್ ವಾಸುದೇವ್, ಧನ್ಯ ಸುಬ್ಬಯ್ಯ, ರವಿ ಟಿ.ವಿ. ಬೋಪಣ್ಣ ಬಿ.ಪಿ., ನಿರನ್ ಉತ್ತಪ್ಪ ಎಂ., ರಶ್ಮಿ ದೀಪಾ ಕೆ.ಎನ್., ಶ್ವೇತಾ ಚೆಂಗಪ್ಪ, ಕರೀನಾ ಆಯ್ಕೆಯಾದರು.
ಒಕ್ಕೂಟದ ಅಧ್ಯಕ್ಷರಾದ ಝರು ಗಣಪತಿ ಅವರು ಸತತ ೯ ವರ್ಷಗಳ ಕಾಲ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದಕ್ಕೆ ಅಭಿನಂದಿಸಲಾಯಿತು. ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಸ್ವಾಗತಿಸಿ, ವಂದಿಸಿದರು.