ವೀರಾಜಪೇಟೆ, ಡಿ. ೧೯: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ೬೬ನೇ ಹುಟ್ಟುಹಬ್ಬದ ಅಂಗವಾಗಿ ವೀರಾಜಪೇಟೆ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಅವರ ನೇತೃತ್ವದಲ್ಲಿ ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿರುವ ಶ್ರೀ ಶಕ್ತಿ ಅಸೋಸಿಯೇಷನ್‌ನ ಶಕ್ತಿ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಸಿಹಿ ಹಂಚಿ, ಮಧ್ಯಾಹ್ನದ ಭೋಜನ ವಿತರಿಸಲಾಯಿತು.

ವೃದ್ಧಾಶ್ರಮ ವಾಸಿಗಳೊಂದಿಗೆ ಕೆಲಕಾಲ ಜೆಡಿಎಸ್ ಪಕ್ಷದ ಸದಸ್ಯರು ಮಾತುಕತೆ ನಡೆಸಿದರು. ಈ ಸಂದರ್ಭ ಮಾತನಾಡಿದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಮಂಜುನಾಥ್, ದೇಶದ ಅಭಿವೃದ್ಧಿ ಜೊತೆಗೆ ಹೆಚ್ಚಿನ ಆದ್ಯತೆಯ ಮೇಲೆ ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಕುಮಾರಸ್ವಾಮಿ ಅವರಿಗೆ ದೇವರು ಹೆಚ್ಚಿನ ಆರೋಗ್ಯ ಕರುಣಿಸಲಿ ಎಂದರಲ್ಲದೆ, ಈಗಾಗಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ನೆನಪಿನಲ್ಲಿ ಉಳಿಯುವಂತಹ ಲಾಟರಿ ನಿಷೇಧ, ಸಾರಾಯಿ ನಿಷೇಧ, ಗ್ರಾಮ ವಾಸ್ತವ್ಯ, ರೈತರ ಸಾಲ ಮನ್ನಾ ಸೇರಿದಂತೆ ಇನ್ನು ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ ಎಂದರು.

ನAತರ ಪಕ್ಷದ ಸದಸ್ಯರು ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯ ಕೋರಿ ಮಾತನಾಡಿ, ರೈತರ ಹಿತಕಾಯುವ ಧ್ಯೇಯದೊಂದಿಗೆ ಕುಮಾರಸ್ವಾಮಿಯವರು ೨೦ ತಿಂಗಳು ನೀಡಿದ ಆಡಳಿತ ಅಭಿವೃದ್ಧಿ ಇಂದಿಗೂ ಜನತೆಯ ಮನಸ್ಸಿನಲ್ಲಿ ಉಳಿದಿದೆ ಎಂದರು.

ಈ ಸಂದರ್ಭ ತಾಲೂಕು ಕಾರ್ಯದರ್ಶಿ ಟಿ.ಆರ್. ಹರ್ಷ, ತಾಲೂಕು ಉಪಾಧ್ಯಕ್ಷ ಕೆ.ಎಸ್. ರಜಾಕ್, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಮಜೀದ್ ಚೋಕಂಡಹಳ್ಳಿ, ಯುವ ಘಟಕದ ಅಧ್ಯಕ್ಷ ಸೈಫುದ್ದೀನ್, ಎಸ್.ಸಿ-ಎಸ್.ಟಿ ಘಟಕದ ಅಮ್ಮತ್ತಿಯ ಜಯಮ್ಮ, ಮುಖಂಡರಾದ ನೂರ್ ಅಹಮ್ಮದ್, ಸಮಾಜ ಸೇವಕರಾದ ಟಿ.ವಿ. ಸಾಜುಮೋನ್, ಶಕ್ತಿ ವೃದ್ಧಾಶ್ರಮದ ಸಹಾಯಕ ಹನುಮಂತು ಹಾಗೂ ಇನ್ನಿತರರು ಉಪಸ್ಥಿತರಿದ್ದರು.