ಮಡಿಕೇರಿ, ಡಿ. ೨೦: ಕೊಯಮತ್ತೂರಿನ ಇಶಾ ಯೋಗ ಕೇಂದ್ರದ ಅಧ್ಯಾತ್ಮ ಸಾಧಕರು ಕೈಗೊಂಡಿರುವ ಆದಿಯೋಗಿ ರಥಯಾತ್ರೆ ಉಡುಪಿಯಿಂದ ಆರಂಭವಾಗಿದ್ದು, ತಾ.೨೨ರಂದು ಮಡಿಕೇರಿಗೆ ಆಗಮಿಸಲಿದೆ ಎಂದು ಇಶಾ ಕೇಂದ್ರದ ಭಕ್ತರಾದ ಧನಂಜಯ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ವರ್ಷ ಇಶಾ ಕೆಂದ್ರದಲ್ಲಿ ನಡೆಯುವ ಮಹಾಶಿವರಾತ್ರಿ ಉತ್ಸವವನ್ನು ಈ ಬಾರಿ ಜನಮಾನಸಕ್ಕೆ ಹತ್ತಿರವಾಗುವಂತೆ ಮಾಡುವ ಉದ್ದೇಶದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಉಡುಪಿಯಿಂದ ಮಣಿಪಾಲ, ಪುತ್ತೂರು, ಸುಳ್ಯ ಮಾರ್ಗವಾಗಿ ಬರಲಿರುವ ರಥವು, ತಾ.೨೨ರಂದು ಮದೆನಾಡಿನಿಂದ ಮಡಿಕೇರಿಗೆ ಪ್ರವೇಶಿಸಲಿದೆ. ಅಂದು ಸಂಜೆ ೫ ಗಂಟೆ ಸುಮಾರಿಗೆ ನಗರದಲ್ಲಿ ಸಂಚರಿಸಲಿದೆ. ಶಿವರಾತ್ರಿಯಂದು ಕೊಯಮತ್ತೂರು ತಲುಪಲಿದೆ ಎಂದು ಮಾಹಿತಿ ನೀಡಿದರು.
ಮದೆನಾಡಿನಿಂದ ಮಡಿಕೇರಿಗೆ ಕಠಿಣ ಏರುದಾರಿ ಇರುವುದರಿಂದ ಮತ್ತು ರಥವು ಸುಮಾರು ೩ ಟನ್ ಭಾರವಿರುವುದರಿಂದ ಸದ್ಭಕ್ತರು ರಥ ಎಳೆಯಲು ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು, ರಥ ಎಳೆಯುವ ಸಂದರ್ಭ ೪೦ ಶಿವಸಾಧಕರು ಜೊತೆಯಲ್ಲಿರಲಿದ್ದಾರೆ. ಇವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಥ ಎಳೆಯುವ ಸೇವೆಯಲ್ಲಿ ಪಾಲ್ಗೊಳ್ಳಬೇಕು. ಅಲ್ಲದೇ ರಥ ಸಾಗುವ ಮಾರ್ಗದಲ್ಲಿ ಸ್ಥಳೀಯರು ಪೂಜೆ ಸಲ್ಲಿಸಲು ಹಾಗೂ ಸಾಧಕರಿಗೆ ಪಾನೀಯ ವಿತರಿಸಲು ಅವಕಾಶವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಶಾ ಕೇಂದ್ರದ ಸ್ವಯಂ ಸೇವಕರಾದ ಅಗಸ್ತö್ಯ, ರಂಜಿತ್, ಅಖಿಲ್, ನಾಗರಾಜ್, ಸ್ಥಳೀಯರಾದ ಗಣೇಶ್ ಶೆಣೈ ಇದ್ದರು.