ಕೂಡಿಗೆ, ಡಿ. ೨೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಹಿರಿಯ ಪ್ರಾಥಮಿಕ ಶಾಲೆಗೆ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾಹಿತಿ ನೀಡುತ್ತಾ ೧೯೬೩ನೆ ವರ್ಷದಲ್ಲಿ ಕಾವೇರಿ ನೀರಾವರಿ ಇಲಾಖೆಯ ಮುಖಾಂತರ ಶಾಲೆ ನಿರ್ಮಾಣವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು ೬೫ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಬಹುತೇಕ ಮಕ್ಕಳು ಕೂಲಿ ಕಾರ್ಮಿಕರ ಮಕ್ಕಳಾಗಿರುತ್ತಾರೆ. ಗ್ರಾಮ ಪಂಚಾಯಿತಿ ವತಿಯಿಂದ ಎರಡು ಕೊಠಡಿಗಳನ್ನು ದುರಸ್ತಿ ಮಾಡಲಾಗಿದೆ. ಉಳಿದ ಕೊಠಡಿಗಳ ಮೇಲ್ಛಾವಣಿ ದುರಸ್ತಿಯಾಗಬೇಕಾಗಿದೆ. ಇದರಿಂದಾಗಿ ಶಾಲಾ ಮಕ್ಕಳಿಗೆ ತೀರಾ ತೊಂದರೆ ಉಂಟಾಗಿದ್ದು ಸಂಬAಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಾಲಾ ಕಟ್ಟಡದ ದುರಸ್ತಿ ಮತ್ತು ಕೊಠಡಿಗಳ ಅಭಿವೃದ್ಧಿ ಮಾಡುವಂತೆ ಮನವಿ ಮಾಡಲಾಗಿದೆ. ಈ ಸಮಸ್ಯೆಯ ಕುರಿತು ತಾಲೂಕು ಕಾರ್ಯ ನಿರ್ವಹಣಾಧಿಕಾರಿರವರ ಗಮನಕ್ಕೆ ತರಲಾಗಿದೆ ಎಂದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಅವರು ವೀಕ್ಷಣೆ ಮಾಡಿ ಹಳೆಯ ಶಾಲೆಯಾಗಿದ್ದು, ಕೊಠಡಿ ಅಭಿವೃದ್ಧಿ ಅವಶ್ಯಕತೆ ಇದೆ. ಮಕ್ಕಳ ಸಂಖ್ಯೆ ಕೂಡ ಹೆಚ್ಚು ಇದ್ದು ಅಭಿವೃದ್ಧಿಗೆ ಬೇಕಾದಂತಹ ಕ್ರಮಗಳನ್ನು ಸಂಬAಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕರಾದ ರಾಜಣ್ಣ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಹರೀಶ್, ಗ್ರಾಮಸ್ಥರಾದ ಚೌಡಪ್ಪ, ರಾಹುಲ್, ಇದ್ದರು.