ಸೋಮವಾರಪೇಟೆ, ಡಿ. ೨೧: ಬೀದಿ ನಾಯಿಗಳ ಪಾಲನಾ ಕೇಂದ್ರವನ್ನು ಯಡವನಾಡಿನಲ್ಲಿ ತೆರೆಯಲು ಮುಂದಾಗಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದೆಂದು ಗ್ರಾಮಸ್ಥರು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸೋಮವಾರಪೇಟೆ ವ್ಯಾಪ್ತಿಯ ಬೀದಿನಾಯಿಗಳನ್ನು ಹಿಡಿದು ಯಡವನಾಡು ಗ್ರಾಮಕ್ಕೆ ಒಳಪಡುವ ಸರ್ಕಾರಿ ಪ್ರಾಥಮಿಕ ಶಾಲೆಯ ಸಮೀಪದ ಸ್ಮಶಾನ ಜಾಗದ ಪಕ್ಕದಲ್ಲಿ ಕೇಂದ್ರ ಸ್ಥಾಪಿಸಿ ಪಾಲನೆ ಮಾಡಲು ಮುಂದಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಇಂತಹ ಕ್ರಮಕ್ಕೆ ತಾಲೂಕು ಆಡಳಿತ ಮುಂದಾಗಬಾರದು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಜನವಸತಿ ಪ್ರದೇಶ, ಶಾಲಾ ಆವರಣದ ಹತ್ತಿರದ ಜಾಗದಲ್ಲಿ ಎಲ್ಲೆಲ್ಲೋ ಇರುವ ಬೀದಿನಾಯಿಗಳನ್ನು ತಂದು ಪಾಲನೆ ಮಾಡುವ ಪ್ರಸ್ತಾಪ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂತಹ ಕ್ರಮಕ್ಕೆ ಆಡಳಿತ ವರ್ಗ ಮುಂದಾಗಬಾರದು. ಒಂದು ವೇಳೆ ಬೀದಿನಾಯಿಗಳ ಪಾಲನಾ ಕೇಂದ್ರ ತೆರೆಯಲು ಮುಂದಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು. ಈ ಸಂಬAಧಿತ ಮನವಿ ಪತ್ರವನ್ನು ಶಿರಸ್ತೇದಾರ್ ಅವರ ಮೂಲಕ ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭ ಶಿವಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಗಣೇಶ್, ಗ್ರಾ.ಪಂ.ಸದಸ್ಯ ಜೋಯಪ್ಪ, ಗ್ರಾಮದ ಪ್ರಮುಖರಾದ ಟಿ.ಕೆ. ರಮೇಶ್, ಪ್ರಶಾಂತ್, ಸುನಿಲ್, ತಮ್ಮಯ್ಯ, ನವೀನ್, ಆದರ್ಶ್ ತಮ್ಮಯ್ಯ, ಉದಯ ಸೇರಿದಂತೆ ಇತರರು ಇದ್ದರು.