ಪೊನ್ನಂಪೇಟೆ, ಡಿ. ೨೨: ಇತ್ತೀಚೆಗೆ ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಅಂತರ ಕಾಲೇಜು ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಬೆಳ್ಳಿ ಪದಕ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದೆ.
ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ೧೨ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿದ್ದ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ, ಫೈನಲ್ ಪಂದ್ಯದಲ್ಲಿ ಬಹುತೇಕ ರಾಷ್ಟ್ರ ಮಟ್ಟದ ಆಟಗಾರರನ್ನು ಒಳಗೊಂಡಿದ್ದ ಅತಿಥೇಯ ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜು ತಂಡದ ವಿರುದ್ಧ ೮-೫ ಗೋಲುಗಳಿಂದ ಸೋಲು ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ.
ದೈಹಿಕ ಶಿಕ್ಷಣ ನಿರ್ದೇಶಕ ಎಂ. ಟಿ. ಸಂತೋಷ್ ಹಾಗೂ ಹಾಕಿ ತರಬೇತುದಾರ ಮಿನ್ನಂಡ ಜೋಯಪ್ಪ ಅವರ ಮಾರ್ಗದರ್ಶನದಲ್ಲಿ ಕಾವೇರಿ ಕಾಲೇಜು ತಂಡ ಈ ಸಾಧನೆ ಮಾಡಿದ್ದು, ಈ ಬಾರಿಯ ದಕ್ಷಿಣ ವಲಯ ಅಂತರ ವಿಶ್ವ ವಿದ್ಯಾಲಯಗಳ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ವಿಶ್ವವಿದ್ಯಾಲಯ ತಂಡ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.