ಸುಂಟಿಕೊಪ್ಪ, ಡಿ. ೨೨: ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಅಪರಾಧಿಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪ್ರಶಂಸನಾ ಪತ್ರ ವಿತರಿಸಿದರು. ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂದಿನ ಪೊನ್ನಂಪೇಟೆ ಉಪನಿರೀಕ್ಷಕ, ಪ್ರಸ್ತುತ ಸುಂಟಿಕೊಪ್ಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್ ರಾಜ್ ಸೇರಿದಂತೆ ಸಿಬ್ಬಂದಿ ವರ್ಗಕ್ಕೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಈ ಸಂದರ್ಭ ಎಎಸ್ಪಿ ದಿನೇಶ್ ಬಾರಿಕೆ, ಡಿವೈಎಸ್ಪಿ ಮಹೇಶ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು. ಮಾರ್ಚ್ ೨೭ ರಂದು ಬೇಗೂರಿನಲ್ಲಿ ಮಗು ಸಹಿತ ಒಂದೇ ಕುಟುಂಬದ ನಾಲ್ವರನ್ನು ಕೊಲೆಗೈದ ಕೇರಳ ಮೂಲದ ಗಿರೀಶ್ನನ್ನು ಮಿಂಚಿನ ಕಾರ್ಯಾಚರಣೆ ಮೂಲಕ ಬಂಧಿಸಿ, ನ್ಯಾಯಾಲಯಕ್ಕೆ ಸೂಕ್ತ ಸಾಕ್ಷಾö್ಯಧಾರವನ್ನು ಒದಗಿಸಿ ಗಲ್ಲು ಶಿಕ್ಷೆ ಕೊಡಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿತ್ತು.