ಕರಿಕೆ, ಡಿ. ೨೨ : ಕೊಡಗು ಅರಣ್ಯ ವೃತ್ತದ ವೀರಾಜಪೇಟೆ ಉಪವಿಭಾಗ ಮುಂಡ್ರೋಟ್ ಪ್ರಾದೇಶಿಕ ವಲಯದ ಮೀನಚೇರಿ ಶಾಖೆಯ ಸಿಪಿಟಿ ೫೬ರಲ್ಲಿ ಗಿಡ ನೆಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಗರಣ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮುಂಡ್ರೋಟ್ ವಲಯದ ಮೀನಚೇರಿ ಶಾಖೆಯಲ್ಲಿ ಅರಣ್ಯೀಕರಣ ಹೆಸರಲ್ಲಿ ಗಿಡ ನೆಡುವ ಸಲುವಾಗಿ ೨೦೨೫ನೇ ಸಾಲಿನಲ್ಲಿ ಸುಮಾರು ರೂ.೩೭ ಲಕ್ಷ ವೆಚ್ಚದಲ್ಲಿ ೧೧,೦೦೦ ಬಿದಿರು, ಮಹಾಗನಿ, ನೇರಳೆ, ಹೆಬ್ಬಲಸು, ಹಲಸು, ಅತ್ತಿ ಗಿಡಗಳನ್ನು ನೆಡಲು ಅಂದಾಜು ಪಟ್ಟಿ ತಯಾರಿಸಿ ಕಂಪಾ ಯೋಜನೆಯ ಅಡಿಯಲ್ಲಿ ಹಣ ಮೀಸಲು ಇರಿಸಿ ಯೋಜನೆ ರೂಪಿಸಲಾಗಿತ್ತು.

ಒಂದು ಹೆಕ್ಟರ್‌ಗೆ ೪೦೦ ಸಸಿಗಳಂತೆ ೨೫ ಹೆಕ್ಟರ್ ಜಾಗದಲ್ಲಿ ೧೧,೦೦೦ ಗಿಡ ನೆಡಬೇಕಿದ್ದು, ಇಲಾಖೆಯ ನಿಯಮದಂತೆ ಒಂದು ಸಸಿ ನೆಟ್ಟು ಬೆಳೆಸಲು ಜಾಗ ಗುರುತಿಸಿ, ಗುಂಡಿ ತೋಡಿ, ಸಸಿ ನೆಟ್ಟು ಬೆಳೆಸಲು ರೂ.೩೩೦ ಸರಕಾರದಿಂದ ಮೀಸಲಾಗಿದೆ. ಆದರೆ ಸದರಿ ಜಾಗದಲ್ಲಿ ಕೇವಲ ೩,೦೦೦ ಗಿಡಗಳನ್ನು ನೆಟ್ಟು ಉಳಿದ ಲೆಕ್ಕ ಅಳತೆ ಪುಸ್ತಕದಲ್ಲಿ ಮಾತ್ರ ದಾಖಲಿಸಿದ್ದು ಕೆಲವು ಗಿಡಗಳನ್ನು ನರ್ಸರಿ ಬ್ಯಾಗ್ನಿಂದ ಬೇರು ಸಮೇತ ಕಿತ್ತು ನೆಡಲಾಗಿದ್ದು ಇವು ಮಣ್ಣುಪಾಲಾಗಿವೆೆ. ಗಿಡಗಳನ್ನು ನೆಡುವುದರಲ್ಲಿ ಕೂಡಾ ಬೇಜವಾಬ್ದಾರಿ ತೋರಿದ್ದು, ಈ ಬಗ್ಗೆ ಜಿಲ್ಲೆಯ ಹಿರಿಯ ಅರಣ್ಯ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಿ ಇದನ್ನು ನಿರ್ವಹಣೆ ಮಾಡಿದ ಆ ಶಾಖೆಯ ತಪ್ಪಿತಸ್ತ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಬೇಕಿದ್ದು, ರಾಜ್ಯದ ಅರಣ್ಯ ಸಚಿವರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

-ಸುಧೀರ್ ಹೊದ್ದೆಟ್ಟಿ