ಸೋಮವಾರಪೇಟೆ,ಡಿ.೨೨: ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯ ಹುದುಗೂರು ವಿಭಾಗಕ್ಕೆ ಒಳಪಟ್ಟ ಕಾಜೂರು ಮೀಸಲು ಅರಣ್ಯದೊಳಗೆ ಮರಗಳ್ಳತನ ದೊಡ್ಡ ಮಟ್ಟದಲ್ಲಿ ನಡೆದಿದ್ದು ಕೂಡಲೆ ಅರಣ್ಯ ಇಲಾಖೆ ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಕೂಂಬಿAಗ್ ನಡೆಸಬೇಕೆಂದು ಗ್ರಾಮ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಮಚ್ಚಂಡ ಅಶೋಕ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳ ಸಹಕಾರದಿಂದಲೇ ಮರಗಳ ಹನನ ನಡೆಯುತ್ತಿರುವ ಸಂಶಯವಿದೆ. ಮರಗಳ್ಳರ ತಂಡ ಮೀಸಲು ಅರಣ್ಯದೊಳಗೆ ಪ್ರವೇಶ ಮಾಡಿ ತೇಗ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು, ವಾಹನಗಳಲ್ಲಿ ಸಾಗಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಬಹುತೇಕ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಇದನ್ನು ಗಮನಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಎಂದು ಆರೋಪಿಸಿದರು.

ಡಿ.೧೩ರಂದು ಮೀಸಲು ಅರಣ್ಯ ವ್ಯಾಪ್ತಿಯ ಕಾಜೂರು ಅರಣ್ಯದಲ್ಲಿ ತೇಗದ ಮರಗಳನ್ನು ಕಡಿದು ಸಾಗಿಸುತ್ತಿದ್ದ ಸಂದರ್ಭ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಮೀಸಲು ಅರಣ್ಯದೊಳಗೆ ತೇಗ ಕಡಿದು ವಾಹನಕ್ಕೆ ತುಂಬಿಸುತ್ತಿದ್ದ ಸಂದರ್ಭ ಸಿಕ್ಕಿಬಿದ್ದ ಅರೋಪಿಯೊಬ್ಬ ಒಂದೆ ದಿನದಲ್ಲಿ ಜಾಮೀನು ಪಡೆದುಕೊಂಡಿದ್ದಾನೆ. ಉಳಿದ ಆರೋಪಿಗಳನ್ನು ಬಂಧಿಸುವ ಕೆಲಸ ಆಗಿಲ್ಲ. ಮರಗಳ್ಳರನ್ನು ರಕ್ಷಿಸಲು ಸ್ಥಳೀಯ ಅಧಿಕಾರಿಗಳು ಮುಂದಾಗಿರುವ ಸಂಶಯ ವ್ಯಕ್ತವಾಗಿದೆ ಎಂದರು.

ಪ್ರಕರಣ ನಡೆದು ೭ ದಿನಗಳ ನಂತರ ಸ್ಥಳಕ್ಕೆ ಸಿಸಿಎಫ್, ಡಿಸಿಎಫ್, ಎಸಿಎಫ್ ಅವರುಗಳು ಆಗಮಿಸಿ ಸ್ಥಳಪರಿಶೀಲನೆ ಮಾಡಿದ್ದಾರೆ. ಪರಿಶೀಲನೆ ಸಂದರ್ಭ ಅರಣ್ಯ ಇಲಾಖೆಯ ವಸತಿ ಗೃಹದ ಪಕ್ಕದಲ್ಲೇ ೨೦ಕ್ಕೂ ಹೆಚ್ಚು ತೇಗದ ಮರಗಳನ್ನು ಕಡಿದಿರುವುದು ಮೇಲಧಿಕಾರಿಗಳ ಗಮನಕ್ಕೆ ಬಂದಿದೆ. ಮರಗಳ್ಳತನದಲ್ಲಿ ಕೆಲ ಸಿಬ್ಬಂದಿಗಳ ಕೈವಾಡವಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕೂಡಲೆ ಇಂತಹ ಅರಣ್ಯ ಇಲಾಖಾ ಸಿಬ್ಬಂದಿಗಳನ್ನು ವಜಾ ಮಾಡಬೇಕು. ಕೂಂಬಿAಗ್ ನಡೆಸಿ ಮರಹನನದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು. ತಪ್ಪಿದಲ್ಲಿ ಸೋಮವಾರಪೇಟೆ ಅರಣ್ಯ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮೀಸಲು ಅರಣ್ಯದಲ್ಲಿ ನಿರಂತರ ಮರಗಳ್ಳತನವಾಗುತ್ತಿರುವ ಬಗ್ಗೆ ಶಾಸಕರಾದ ಡಾ.ಮಂತರ್‌ಗೌಡ ಅವರು, ಅಕ್ರಮದ ಬಗ್ಗೆ ಅರಣ್ಯ ಸಚಿವರ ಗಮನಕ್ಕೆ ತರಬೇಕು. ಉನ್ನತಮಟ್ಟದ ತನಿಖೆ ನಡೆಸಿ ಮರಗಳ್ಳರೊಂದಿಗೆ ಶಾಮೀಲಾಗಿರುವ ಅರಣ್ಯ ಇಲಾಖೆಯ ನೌಕರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಮೀಸಲು ಅರಣ್ಯದೊಳಗೆ ಕೊಟ್ಯಂತರ ರೂ.ಗಳ ಮರಗಳ್ಳತನವಾಗಿರುವ ಬಗ್ಗೆ ಬಲವಾದ ಸಂಶಯ ಮೂಡಿದೆ. ಮರಗಳ್ಳರಿಗೆ ಕಠಿಣ ಶಿಕ್ಷೆಯಾಗುವ ಸೆಕ್ಷನ್‌ಗಳನ್ನು ಹಾಕಬೇಕು ಎಂದರು.

ರೈತರು ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಒಂದು ಮರ ಕಡಿದರೆ, ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಮಾನಸಿಕ ಹಿಂಸೆಯೊAದಿಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಮೀಸಲು ಅರಣ್ಯದಲ್ಲಿ ಮರಗಳ್ಳರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಮೀಸಲು ಅರಣ್ಯದೊಳಗೆ ಮರಗಳ್ಳತನದಲ್ಲಿ ಭಾಗಿಯಾಗಿರುವ ಆರೋಪಿತ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆಯ ಮುಂದೆ ರೈತ ಸಂಘದಿAದಲೂ ಧರಣಿ ನಡೆಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ಪದಾಧಿಕಾರಿಗಳಾದ ಕುಶಾಲಪ್ಪ, ರಮೇಶ್ ಇದ್ದರು.