ಶ್ರೀಮAಗಲ, ಡಿ. ೨೨: ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ಜನವರಿ ೨೦ರಂದು ಜನಾಂಗದ ಮಹಿಳಾ ಸಂಘ ಸಂಸ್ಥೆಯ ತಂಡಗಳಿಗೆ ಥ್ರೋಬಾಲ್ ಪಂದ್ಯಾಟವನ್ನು ಪೊನ್ನಂಪೇಟೆ ಕೊಡವ ಸಮಾಜ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿ ತೀರ್ಮಾನದಂತೆ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ, ಮಹಿಳೆಯರಲ್ಲಿ ಕ್ರೀಡಾ ಸಾಮರ್ಥ್ಯ ಹೊರತರಲು ಒಗ್ಗಟ್ಟು ಹಾಗೂ ಪರಸ್ಪರ ಸಂಪರ್ಕ ಸ್ನೇಹ ಬೆಳೆಸಲು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಮಹಿಳೆಯರಲ್ಲಿ ಆರೋಗ್ಯದತ್ತ ಹೆಚ್ಚಿನ ಕಾಳಜಿ, ಮನೋರಂಜನೆ ಹಾಗೂ ಮಹಿಳೆಯರು ಆರೋಗ್ಯವಾಗಿದ್ದರೆ ಸಮಾಜವು ಸಹ ಶಕ್ತಿಯುತವಾಗಿರುತ್ತದೆ ಎಂಬ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪೊಮ್ಮಕ್ಕಡ ಕೂಟದ ಗೌರವ ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ಮಾತನಾಡಿ, ಥ್ರೋಬಾಲ್ ಟೂರ್ನಮೆಂಟ್ ೧೮ ವರ್ಷ ಮೀರಿದ ಕೊಡವ ಜನಾಂಗದ ಯಾವುದೇ ಸಂಘ ಸಂಸ್ಥೆಗಳನ್ನು ಪ್ರತಿನಿಧಿಸುವ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ವ್ಯಾಪ್ತಿಯ ತಂಡವಾಗಿರಬೇಕು, ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಆಕರ್ಷಕ ಟ್ರೋಪಿಯೊಂದಿಗೆ ನಗದು ಬಹುಮಾನ ಕ್ರಮವಾಗಿ ೧೫ಸಾವಿರ, ೧೦ ಸಾವಿರ ಮತ್ತು ೭ ಸಾವಿರ ಇರಲಿದೆ. ತಂಡಗಳನ್ನು ನೋಂದಾಯಿಸಿಕೊಳ್ಳಲು ಜನವರಿ ೧೦ ಕೊನೆಯ ದಿನವಾಗಿದ್ದು, ಮೊದಲು ಬರುವ ೧೬ ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ. ತಂಡಗಳನ್ನು ನೋಂದಾಯಿಸಿಕೊಳ್ಳಲು ೯೪೮೦೨೯೦೩೫೫, ೯೧೪೧೭೪೪೦೭೨ ಸಂಖ್ಯೆ ಅಥವಾ ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಯಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.