ಮಡಿಕೇರಿ, ಡಿ. ೨೨: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಶಾಶ್ವತವಾಗಿ ನೆಲೆಯೂರುವಂತೆ ಮಾಡಲು ವಿವಿಧ ಕ್ಷೇತ್ರಗಳ ಪ್ರವಾಸ ಉದ್ಯಮವನ್ನು ಬೆಳವಣಿಗೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟರು.

ತಾ. ೨೦ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಕೂರ್ಗ್ ಕಾರ್ನಿವಾಲ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಪಾಲ್ಗೊಂಡು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಸಾಂಸ್ಕೃತಿಕ, ಅಧ್ಯಾತ್ಮಿಕ, ಪ್ರಾಕೃತಿಕ ಹಾಗೂ ಇತರ ಬೇರೆ ಬೇರೆ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಎಂದು ಕರೆ ನೀಡಿದ ಅವರು, ಈ ನಿಟ್ಟಿನಲ್ಲಿ ಕೊಡಗಿನ ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಧ್ಯಯನ ನಡೆಸಿ ಕಾಫಿ ಟೇಬಲ್ ಪುಸ್ತಕವನ್ನು ಪ್ರಕಟ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಆಹಾರ ಉತ್ಸವ ಸೇರಿದಂತೆ ಇತರ ಬೇರೆ ಬೇರೆ ಉತ್ಸವವನ್ನು ಕೊಡಗಿನಲ್ಲಿ ಆಚರಿಸುವಂತಾಗಬೇಕು ಎಂದು ಅವರು ಆಶಿಸಿದರು.

ಜಿಲ್ಲಾಡಳಿತ ಪ್ರಕಟಿಸಿರುವ ಕೊಡಗು ಕಾಫಿ ಟೇಬಲ್ ಕನ್ನಡ ಹಾಗೂ ಇಂಗ್ಲೀಷ್ ಪ್ರತಿಯನ್ನು ಜಿಲ್ಲಾಧಿಕಾರಿ ಕೊಹೇರ ಸಂಸ್ಥೆಗೆ ನೀಡಿದರು.

ಕೊಡಗು ಹೋಟೆಲ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸದ್ಯದಲ್ಲಿಯೇ ಬೃಹತ್ ಪ್ರಮಾಣದ ಆಹಾರ ಮೇಳವನ್ನು ಆಯೋಜಿಸಲಾಗುವುದು ಮತ್ತು ಆ ಮೂಲಕ ಕೊಡಗನ್ನು ರಾಷ್ಟçದಲ್ಲೇ ಉತ್ತಮ ಪ್ರವಾಸೋದ್ಯಮ ತಾಣ ಎಂದು ಗುರುತಿಸುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ್‌ನ ಸಲಹೆಗಾರ ಜಿ ಚಿದ್ವಿಲಾಸ್ ಅವರು ಮಾತನಾಡಿ, ಮಡಿಕೇರಿಯಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಜಾಗಗಳು ಇಲ್ಲದಿರುವುದರಿಂದ ಸಹಸ್ರಾರು ಪ್ರವಾಸಿಗರು ಮಡಿಕೇರಿಗೆ ಬರುತ್ತಿಲ್ಲ ಎಂಬ ಪೊಲೀಸ್ ಮಾಹಿತಿಯನ್ನು ಉಲ್ಲೇಖಿಸಿದರು.

ಕಳೆದ ವರ್ಷ ರಾಜಾಸೀಟಿನಲ್ಲಿ ೧೫ ರಿಂದ ೨೦ ಸಾವಿರ ವಾಹನಗಳ ಲೆಕ್ಕ ಲಭಿಸಿದ್ದು, ಈ ವರ್ಷ ಅದು ೫ ರಿಂದ ೬ ಸಾವಿರ ವಾಹನಗಳಿಗೆ ಇಳಿದಿದೆ ಎಂದು ಅವರು ಪ್ರಸ್ತಾಪಿಸಿ, ಈ ನಿಟ್ಟಿನಲ್ಲಿ ಸಂಬAಧಿಸಿದವರು ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.

ನಗರಸಭಾ ಕಾರ್ಯಾಲಯ ಬಳಿ ಉದ್ದೇಶಿಸಿರುವ ೯.೫ ಕೋಟಿ ವೆಚ್ಚದ ವಾಹನ ನಿಲುಗಡೆ ತಾಣ ಹಾಗೂ ಕಟ್ಟಡವನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳುವಂತೆ ಸಂಬAಧಿಸಿದವರಿಗೆ ಸೂಚಿಸುವಂತೆ ಜಿಲ್ಲಾಧಿಕಾರಿಯವರನ್ನು ಅವರು ಕೋರಿದರು.

ಮಂಗಳೂರು ರಸ್ತೆಯ ಐಬಿ ಕಟ್ಟಡ ಇದೀಗ ವೈದ್ಯಕೀಯ ಕಾಲೇಜಿಗೆ ನೀಡಲಾಗಿದ್ದು, ಅದನ್ನು ಹಿಂಪಡೆದಲ್ಲಿ, ಅಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಬಹುದಾಗಿದೆ. ನಗರದ ವಾಹನದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯ ಇದೆ ಎಂದು ಅವರು ವಿವರಿಸಿದರು.

ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಅವರು ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಸರಕಾರದಲ್ಲಿ ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದು, ಕೊಡಗಿನ ಜನ ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ರಸ್ತೆ ಬದಿಯಲ್ಲಿ ಖಾಲಿ ಜಾಗಗಳಿದ್ದಲ್ಲಿ ಅಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆ ಹಮ್ಮಿಕೊಂಡಲ್ಲಿ ಸರಕಾರ ಪ್ರೋತ್ಸಾಹ ಧನ ನೀಡಲಿದೆ ಎಂದು ಅವರು ವಿವರಿಸಿದರು.

ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ಸ್ ಅಸೊಸಿಯೇಷನ್ ಕಾರ್ಯದರ್ಶಿ ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು. ಉಪನ್ಯಾಸಕಿ ಅನಿತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಕೂರ್ಗ್ ಕಾರ್ನಿವಲ್ ಕಾರ್ಯಕ್ರಮದ ಆಯೋಜಕ ಮದನ್ ವಂದಿಸಿದರು.