ಮಡಿಕೇರಿ, ಡಿ. ೨೨: ತಾಲೂಕಿನ ಕೊಯನಾಡು ವಲಯ ಅರಣ್ಯ ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಅಧಿಕಾರಿಗಳ ವಸತಿ ಗೃಹವನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ಕೊಯನಾಡು ಬಳಿಯ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಸತಿ ಗೃಹ ಉದ್ಘಾಟಿಸಿದರು. ಇದೇ ವೇಳೆ ೩೦ ಕೃಷಿಕರಿಗೆ ತಲಾ ೨ ಜೇನು ಪೆಟ್ಟಿಗೆ, ಹಾಗೂ ೬ ಜನ ಮಹಿಳೆಯರಿಗೆ ಹೊಲಿಗೆಯಂತ್ರ ಹಸ್ತಾಂತರಿಸಿದರು. ಜೊತೆಗೆ ಊರುಬೈಲು ಮತ್ತು ಕೂಡಡ್ಕ ಸರ್ಕಾರಿ ಶಾಲೆಗೆ ಡಿಜಿಟಲ್ ಸಾಕ್ಷರತೆ ಉದ್ದೇಶದಿಂದ ಲ್ಯಾಪ್ಟಾಪ್ ಮತ್ತು ಪ್ರಾಜೆಕ್ಟರ್ನ್ನು ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು, ಸ್ವಾವಲಂಬಿಯಾಗಿ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜೇನು ಸಾಕಾಣಿಕೆಯ ಪೆಟ್ಟಿಗೆಯನ್ನು ೩೦ ಜನರಿಗೆ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಡಿಜಿಟಲ್ ಸಾಕ್ಷರತೆ ಸಂಬAಧ ಲ್ಯಾಪ್ಟಾಪ್ ಮತ್ತು ಪ್ರಾಜೆಕ್ಟರ್ ವಿತರಿಸಲಾಗಿದೆ. ಹಾಗೆಯೇ ಮಹಿಳೆಯರ ಸ್ವ ಉದ್ಯೋಗಕ್ಕಾಗಿ ೬ ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ. ಕೊಡಗು ಮಾನವ ವನ್ಯಜೀವಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿ ವತಿಯಿಂದ ಸುಸ್ಥಿರ ಅಭಿವೃದ್ಧಿ ಚಟುವಟಿಕೆ ಅಂಗವಾಗಿ ಕಾಡಂಚಿನ ಗ್ರಾಮಸ್ಥರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗುವತ್ತ ಗಮನಹರಿಸಬೇಕು. ಸ್ವ ಉದ್ಯೋಗ ಕೈಗೊಳ್ಳುವುದರಿಂದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚಾಗಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಉದ್ಯೋಗ ಕೈಗೊಂಡು ಪ್ರಗತಿ ಸಾಧಿಸುವತ್ತ ಗಮನಹರಿಸಬೇಕು. ಸ್ಥಳೀಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಅನ್ಯೋನ್ಯತೆಯಿಂದ ಇರಬೇಕು. ಕಾಡನ್ನು ಉಳಿಸಬೇಕು. ನಾಡಿನ ಜನರು ಸಹ ಅಭಿವೃದ್ಧಿಯತ್ತ ಸಾಗಬೇಕು. ಒಟ್ಟಾರೆ ಸಮತೋಲನದಿಂದ ಎಲ್ಲರೂ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಪೊನ್ನಣ್ಣ ನುಡಿದರು.
ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಮಾತನಾಡಿ, ಅರಣ್ಯ ಇಲಾಖೆಯಿಂದ ಕಾಡಂಚಿನ ಜನರಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ. ಇದನ್ನು ಬಳಸಿಕೊಂಡು ಅರಣ್ಯ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂದಿಲ್ ಕುಮಾರ್, ವಲಯ ಅರಣ್ಯಾಧಿಕಾರಿ ದೇಚಮ್ಮ, ಸ್ಥಳೀಯರಾದ ಪಿ.ಎಲ್.ಸುರೇಶ್, ಕಾಡುಮನೆ ಪುರುಷೋತ್ತಮ, ಕುಸುಮಾಕರ, ಹರೀಶ್ ನಿರಂಜನ, ಆಶಾ, ಇತರರು ಇದ್ದರು.
ಶಾಲೆ ನಿರ್ಮಾಣದ ಜಾಗ ವೀಕ್ಷಣೆ
ಬಳಿಕ ಕೊಯನಾಡು ಬಳಿ ನೂತನವಾಗಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಾಗವನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ವೀಕ್ಷಿಸಿದರು.
ನಂತರ ಮಾತನಾಡಿದ ಶಾಸಕರು, ಕಳೆದ ಎರಡು ವರ್ಷದ ಹಿಂದೆ ಮಳೆಗಾಲದ ಅವಧಿಯಲ್ಲಿ ಸುರಿದ ಹೆಚ್ಚಿನ ಮಳೆಗೆ ಕೊಯನಾಡು ಶಾಲೆ ಹಿಂಬದಿ ಬರೆಕುಸಿದು ಅಪಾಯಕಾರಿ ವಾತಾವರಣ ನಿರ್ಮಾಣವಾಗಿತ್ತು. ಹಾಗಾಗಿ ಮಳೆಗಾಲ ಸಂದರ್ಭದಲ್ಲಿ ಸಂಪಾಜೆಯ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿಕೊಡಲಾಗುತ್ತಿತ್ತು. ವಿದ್ಯಾರ್ಥಿಗಳು ಸಂಪಾಜೆ ಶಾಲೆಗೆ ಹೋಗಿ ಪಾಠ ಪ್ರವಚನ ಕೇಳುತ್ತಿದ್ದರು. ಸದ್ಯ ಈಗ ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಸೂಕ್ತವಾಗಿದ್ದಲ್ಲಿ ಕಟ್ಟಡ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಈಗಾಗಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ೪೦ ಲಕ್ಷ ರೂ. ಬಿಡುಗಡೆಯಾಗಿದ್ದು, ಉಳಿದ ಹಣವನ್ನು ಬಿಡುಗಡೆ ಮಾಡಿಸಲಾಗುವುದು. ಸದ್ಯ ಶಾಲಾ ಕಟ್ಟಡ ನಿರ್ಮಾಣ ಸಂಬAಧ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಅವರು ಚರ್ಚಿಸಿ ಅಂತಿಮಗೊಳಿಸಬೇಕಿದೆ. ಜೊತೆಗೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಯು ಶಾಲಾ ಶಿಕ್ಷಣ ಇಲಾಖೆ ಹೆಸರಿಗೆ ಆಗಬೇಕಿದೆ ಎಂದರು.
ಕೊಯನಾಡು ಭಾಗದಲ್ಲಿ ಹಲವು ಕುಟುಂಬಗಳಿದ್ದು, ಇಲ್ಲಿನ ಮಕ್ಕಳು ಬೇರೆಡೆಗೆ ತೆರಳಿ ವಿದ್ಯಾಭ್ಯಾಸ ಮಾಡಬೇಕಿರುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಸ್ಥಳೀಯರ ಒತ್ತಾಯದಂತೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಗಿದೆ. ಆದಷ್ಟು ಶೀಘ್ರ ಈ ಕಾರ್ಯ ಆಗಲಿದೆ ಎಂದು ತಿಳಿಸಿದರು. ಈ ಹಿಂದೆ ಜಾಗವನ್ನು ಗುರುತಿಸಲಾಗಿದ್ದು, ಸಮನ್ವಯತೆ ಕೊರತೆಯಿಂದ ಭೂಮಿ ಹಸ್ತಾಂತರವಾಗಿರಲಿಲ್ಲ. ಆದ್ದರಿಂದ ಈ ಜಾಗ ಗುರುತಿಸಲಾಗಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಅವರು ಶಾಲಾ ಕಟ್ಟಡ ಇಲ್ಲದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದು, ಸದ್ಯ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆತಿರುವುದು ಸಂತಸ ತಂದಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪ್ರಮುಖರಾದ ಸೂರಜ್ ಹೊಸೂರು, ಇತರರು ಇದ್ದರು.