ಕುಶಾಲನಗರ, ಡಿ. ೨೨: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಂಸ್ಥೆ ಜಿಲ್ಲೆಯಲ್ಲಿ ಯೋಜನಾ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಚೇಂಬರ್ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಪಿ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರದ ಪಾಳ್ಯಂ ಎಮರಾಲ್ಡ್ ಸಭಾಂಗಣದಲ್ಲಿ ನಡೆದ ಕುಶಾಲನಗರ ಚೇಂಬರ್ ಸ್ಥಾನೀಯ ಸಮಿತಿಯ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಚೇಂಬರ್ ಮೂಲಕ ವ್ಯಾಪಾರಿಗಳಿಗೆ, ಕೈಗಾರಿಕೋದ್ಯಮಗಳಿಗೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಉದ್ಯಮಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದ ರಮೇಶ್, ಕುಶಾಲನಗರದಲ್ಲಿ ಸಂಸ್ಥೆಯ ಮಾಜಿ ಪದಾಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಕಾರ್ಯ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು. ಇದೇ ಸಂದರ್ಭ ಮಾತನಾಡಿದ ಅವರು ಕಳೆದ ಹಲವು ದಶಕಗಳಿಂದ ಚೇಂಬರ್ ಬೆಳೆದು ಬಂದ ಹಾದಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಅಧ್ಯಕ್ಷರಾದ ಬಿ ಆರ್ ನಾಗೇಂದ್ರ ಪ್ರಸಾದ್ ಮಾತನಾಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ೧೮ ಸ್ಥಾನೀಯ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು ಸುಮಾರು ಐದರಿಂದ ಆರು ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿಯೊಂದು ಸಮಿತಿಗಳು ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸದಸ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದು ಈ ಸಂದರ್ಭ ಅತಿಥಿಗಳಿಗೆ ಉತ್ತಮ ಆತಿಥ್ಯ ನೀಡಿ ಉತ್ತಮ ಸೇವೆ ನೀಡಬೇಕಾಗಿದೆ. ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಉದ್ಯಮದ ಬೆಳವಣಿಗೆ ಕೂಡ ಸಾಧ್ಯ ಎಂದರು. ಇತ್ತೀಚೆಗೆ ನಡೆದ ಎಫ್ಕೆಸಿಸಿಐ ಮೂಲಕ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಜಿಲ್ಲೆಯಿಂದ ೬೫ ಮಂದಿ ಉದ್ಯಮಿಗಳು ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದ ಅವರು ಕುಶಾಲನಗರ ಸ್ಥಾನೀಯ ಸಮಿತಿಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿಲ್ಲಾ ಚೇಂಬರ್ ಸಂಘಟನಾ ಕಾರ್ಯದರ್ಶಿ ಟಿ.ಆg.ï ಶರವಣ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಒಗ್ಗಟ್ಟಿನ ಮೂಲಕ ಸಂಸ್ಥೆಯ ಬಲವರ್ಧನೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಕೈಜೋಡಿಸಬೇಕು ಎಂದರು. ಇದೇ ಸಂದರ್ಭ ೨೦೨೬ರ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ೧೯೯೦ರಲ್ಲಿ ಕುಶಾಲನಗರ ಚೇಂಬರ್ ಆರಂಭವಾಗಲು ಪ್ರಮುಖ ಕಾರಣಕರ್ತರಾದ ವಿ.ವಿ. ನಾಗೇಂದ್ರ, ಸ್ಥಾಪಕ ಅಧ್ಯಕ್ಷರಾದ ಪಿ ಪಿ ಸತ್ಯನಾರಾಯಣ, ಸ್ಥಾಪಕ ಕಾರ್ಯದರ್ಶಿ ಹಾಗೂ ಶಕ್ತಿ ಸಲಹಾ ಸಂಪಾದಕರಾದ ಬಿ ಜಿ ಅನಂತಶಯನ ಸೇರಿದಂತೆ ೨೦೨೪ರ ತನಕ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರು ಮತ್ತು ಮಾಜಿ ಕಾರ್ಯದರ್ಶಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ನಡೆದ ಸಭೆಯಲ್ಲಿ ಮುಂದಿನ ಯೋಜನೆಗಳ ಮಂಡನೆ ಮತ್ತು ಚರ್ಚೆ ನಡೆಯಿತು. ಇದೇ ಸಂದರ್ಭ ಸರ್ಕಾರದ ಆದೇಶದ ಪ್ರಕಾರ ಎರಡು ಲೀಟರ್ ಪ್ರಮಾಣದ ನೀರಿನ ಬಾಟಲ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಬಳಕೆ ನಿಷೇಧದ ವಿಷಯದ ಬಗ್ಗೆ ವರ್ತಕರು ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಸರ್ಕಾರ ಮರು ಚಿಂತನೆ ಮಾಡುವುದು ಅಗತ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್. ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೇಂಬರ್ ಕಾರ್ಯದರ್ಶಿ ಚಿತ್ರಾ ರಮೇಶ್, ಉಪಾಧ್ಯಕ್ಷರಾದ ಎಂ.ಡಿ. ರಂಗಸ್ವಾಮಿ, ಕೋಶಾಧಿಕಾರಿ ಎನ್ ವಿ ಬಾಬು, ಸಹ ಕಾರ್ಯದರ್ಶಿ ಬಿ.ಎಂ. ಅಂಜನ್, ಮಾಜಿ ಅಧ್ಯಕ್ಷರಾದ ರವೀಂದ್ರ ಮತ್ತು ನಿರ್ದೇಶಕರು ಹಾಗೂ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು.