ಚೆಟ್ಟಳ್ಳಿ, ಡಿ. ೨೨: ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬಾಲ ಗರ್ಭಿಣಿ ಕುರಿತು ಸುಂಠಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಕಾನೂನು ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು. ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಪ್ರಭಾವತಿ, ಇವರು ಮಾತನಾಡಿ ಮಕ್ಕಳು ಶಿಕ್ಷಣ ಪಡೆಯುವ ವಯಸ್ಸಿನಲ್ಲಿ ಶಿಕ್ಷಣದ ಕಡೆ ಮಾತ್ರ ಗಮನ ಹರಿಸಬೇಕು. ಓದುವ ವಯಸ್ಸಿನಲ್ಲಿ ಯಾವುದೇ ಆಕರ್ಷಣೆಗೆ ಒಳಗಾಗಬಾರದು ಅಲ್ಲದೆ ಸಮಾಜದಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ರೀತಿಯ ಮಾತುಕತೆಯಾಗಲೀ ಒಡನಾಟವನ್ನು ಇಟ್ಟುಕೊಳ್ಳಬಾರದು ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಆಕರ್ಷಣೆಗೆ ಒಳಗಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಶಾಲೆಗೆ ಹೋಗುವ ಮಕ್ಕಳ ಬಗ್ಗೆ ಅವರ ತಂದೆ, ತಾಯಿಗಳು, ಮಕ್ಕಳ ಆಗುಹೋಗುಗಳ ಬಗ್ಗೆ ಗಮನ ಹರಿಸಬೇಕು ಎಂದು ಕಿವಿ ಮಾತಾಡಿದರು. ಸಖಿ ಒನ್ ಸ್ಟಾಪ್ ಸೆಂಟರ್‌ನ ಕಾನೂನು ಸಲಹೆಗಾರರಾದ ರೇವತಿ ಮಾತನಾಡಿ ಬಾಲ್ಯ ವಿವಾಹ ನಿಷೇಧ ಕುರಿತು ಮಾತನಾಡಿದರು. ಹೆಣ್ಣು ಮಕ್ಕಳ ಮದುವೆ ವಯಸ್ಸು ೧೮, ಗಂಡು ಮಕ್ಕಳು ೨೧ ವರ್ಷ ಪೂರ್ಣವಾಗುವವರೆಗೂ ಮದುವೆ ಆಗಬಾರದು. ಈ ವಯೋಮಾನದ ಒಳಗೆ ಮದುವೆಯಾದರೆ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಇದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಈ ಅಪರಾಧಕ್ಕೆ ಜೈಲು ಹಾಗೂ ದಂಡ ಸಹಿತ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಮಿಷನ್ ಸಂಯೋಜಕಿ ಮಮತಾ ಮಾತನಾಡಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. ಹೆಣ್ಣುಮಗಳನ್ನು ರಕ್ಷಿಸಿ ಶಿಕ್ಷಣವಂತರಾಗಿ ಮಾಡಬೇಕು ಎಂದರು ಮಕ್ಕಳ ಸಹಾಯವಾಣಿ ೧೦೯೮ ಹಾಗೂ ತುರ್ತುಸೇವೆ ೧೧೨ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸುಂಠಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ಶಿಕ್ಷಕ ವೃಂದದವರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.