ಪೊನ್ನಂಪೇಟೆ, ಡಿ. ೨೩: ಹುಟ್ಟು ಹಬ್ಬ ಆಚರಿಸಿ ಕೊಳ್ಳುವುದೊಂದು ಈಗ ಒಂದು ಫ್ಯಾಷನ್. ಕೇಕ್ ಕತ್ತಿರಿಸುವುದು, ಒಂದಿಷ್ಟು ಬಲೂನು, ಪಟಾಕಿಗಳು, ಟೋಪಿ, ದೀಪ ಹಚ್ಚುವದು, ದೀಪ ಆರಿಸುವುದು, ಮುಖಕ್ಕೆ ಕೇಕ್‌ನ ಪೇಸ್ಟ್ ಬಳಿಯುವದು ಇತ್ಯಾದಿ ಗಳೆಲ್ಲ ಈಗ ಒಂದು ಟ್ರೆಂಡ್ ಆಗಿದೆ. ಆದರೆ ಇದಕ್ಕೆಲ್ಲ ಅಪವಾದ ಎಂಬAತೆ ಗೋಣಿಕೊಪ್ಪಲಿನ ಶಾಲೆ ಯೊಂದರಲ್ಲಿ ಪುಸ್ತಕ ಪ್ರೀತಿ ಪ್ರಯೋಗ ಸದ್ದಿಲ್ಲದೇ ಆಕರ್ಷಿಸತೊಡಗಿದೆ. ಪ್ರತಿಯೊಬ್ಬರಿಗೂ ಹುಟ್ಟುಹಬ್ಬ ಒಂದು ಸ್ಮರಣೀಯ ದಿನ. ಇಂದಿನ ಮಕ್ಕಳಂತೂ ಅದಕ್ಕಾಗಿ ಕಾಯುತ್ತಿರುತ್ತಾರೆ. ವಿದ್ಯಾರ್ಥಿಗಳಂತೂ ಶಾಲೆಯಲ್ಲಿ ಸಹಪಾಠಿಗಳ ಮುಂದೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದೆಂದರೆ ಅದೇನೋ ಸಂಭ್ರಮ. ಹುಟ್ಟು ಹಬ್ಬವಿರುವ ಮಕ್ಕಳಿಗೆ ಶಾಲೆಗಳ ಪ್ರಾರ್ಥನಾ ಸಮಯದಲ್ಲಿ ಸಾಮೂಹಿಕವಾಗಿ ಶುಭಾಶಯ ಹೇಳುವ ಕೆಲ ಆಚರಣೆಗಳನ್ನು ಇಂದು ಬಹುತೇಕ ಶಾಲೆಗಳಲ್ಲಿ ಮಾಡುತ್ತಾರೆ. ಸಾಮಾನ್ಯವಾಗಿ ಇಂತಹ ಆಚರಣೆಗಳು ಶಾಲೆಯಲ್ಲಿ ಜಾರಿಯಲ್ಲಿರುವಾಗ ಗೋಣಿಕೊಪ್ಪಲಿನ ಲಯನ್ಸ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಪುಸ್ತಕ ಪ್ರೀತಿ ಹೆಚ್ಚಿಸಲು ಮಕ್ಕಳ ಹುಟ್ಟುಹಬ್ಬಕ್ಕೊಂದು ಪುಸ್ತಕ ಕೊಡುಗೆಯ ವಿನೂತನ ಯೋಜನೆ ಯೊಂದನ್ನು ಜಾರಿಗೆ ತಂದು ಗಮನ ಸೆಳೆದಿದೆ. ‘ಹುಟ್ಟು ಹಬ್ಬಕ್ಕೊಂದು ಪುಸ್ತಕ ಕಾಣಿಕೆ’ ಎಂಬ ಹೊಸತನ ಶಾಲೆಯ ಶೈಕ್ಷಣಿಕ ಪ್ರಯೋಗಗಳಲ್ಲಿ ಒಂದಾಗಿದ್ದು, ಸಹಜವಾಗಿಯೇ ಮಕ್ಕಳಿಗೆ ಪುಸ್ತಕ ಪ್ರೀತಿ ಪ್ರಭಾವಿಸುವಲ್ಲಿ ಯಶಸ್ವಿಯಾಗಿದೆ.
ಪುಸ್ತಕಗಳನ್ನು ಓದುವುದರಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅಮೆರಿಕದ ಅಧ್ಯಕ್ಷರಾಗಿದ್ದ ಜೇಮ್ಸ್ ಅಬ್ರಹಾಂ ಗಾರ್ಫೀಲ್ಡ್ ಅವರು ಉತ್ತಮ ಉದಾಹರಣೆಯಾಗಿದ್ದರು. ತೀರ ಬಡಕುಟುಂಬದಲ್ಲಿ ಜನಿಸಿದ ಇವರು, ಚಿಕ್ಕಂದಿನಿAದಲೇ ಪುಸ್ತಕ ಓದುವ ಹವ್ಯಾಸ ಬೆಳೆಸಿ ಕೊಂಡಿದ್ದರು. ಅವರಿವರ ಮನೆಗೆಲಸ ಮಾಡಿ, ಕಲ್ಲು ಒರೆಸಿ, ಕೆತ್ತನೆ ಕೆಲಸ ಮಾಡಿ ಅದರಿಂದ ಬಂದ ಕೂಲಿಯಿಂದ ಪುಸ್ತಕ ಕೊಂಡುಕೊಳ್ಳುತ್ತಿ ದ್ದರು. ಸ್ನೇಹಿತರಿಂದ ಪುಸ್ತಕಗಳನ್ನು ಸಾಲವಾಗಿ ಪಡೆಯುತ್ತಿದ್ದರು. ದಿನದ ದುಡಿಮೆ, ಉಪಹಾರ, ಊಟದ ಸಮಯದಲ್ಲಿಯೂ ಪುಸ್ತಕಗಳನ್ನು ಓದುತ್ತಿದ್ದರು. ಬಸ್ಸಿಗಾಗಿ ಕಾಯುವ ಸಂದರ್ಭದಲ್ಲೂ ಪುಸ್ತಕ ಓದುತ್ತಿದ್ದರು. ಹೀಗೆ ಅವರು ಕೇವಲ ಇಪ್ಪತ್ತಾರನೇ ವಯಸ್ಸಿನಲ್ಲಿ ಅಮೇರಿಕದ ಓಹಿಯೋ ಪ್ರಾಂತದ ಸೆನೆಟ್ ಸದಸ್ಯರಾದರು. ತನ್ನ ೩೩ನೇ ವಯಸ್ಸಿನಲ್ಲಿ ತಮ್ಮ ಜ್ಞಾನ, ಅನುಭವದ ಮೂಲಕ ಅಮೆರಿಕದ ರಾಷ್ಟಾçಧ್ಯಕ್ಷರಾದರು. ಈ ರೀತಿಯ ಉದಾಹರಣೆಗಳನ್ನೇ ಆಧಾರವಾಗಿಟ್ಟು ಕೊಂಡ ಲಯನ್ಸ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ತಾಜ್ ತಂಗಮ್ಮ ಶಾಲೆಯಲ್ಲಿ ‘ಹುಟ್ಟು ಹಬ್ಬಕ್ಕೊಂದು ಪುಸ್ತಕ ಕಾಣಿಕೆ’ ಯೋಜನೆ ಜಾರಿಗೆ ತಂದು ಗಮನ ಸೆಳೆದಿದ್ದಾರೆ.
ಶಾಲೆಯ ಪ್ರತಿ ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದಂದು ತರಗತಿಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಚಾಕೊಲೆಟ್‌ಗಳನ್ನು ಕೊಡುವ ಬದಲು ಅದೇ ಮೊತ್ತದ ಮೌಲ್ಯದ ಒಂದು ಪುಸ್ತಕವನ್ನು ಶಾಲಾ ಗ್ರಂಥಾಲಯಕ್ಕೆ ದಾನವಾಗಿ ನೀಡುವಂತೆ ಮನವಿ ಮಾಡಿದರು. ಈ ಕುರಿತು ಎಲ್ಲಾ ತರಗತಿಗಳ ವ್ಯಾಟ್ಸಾö್ಯಪ್ ಗ್ರೂಪ್‌ಗಳಲ್ಲಿ ವಿಷಯ ಪ್ರಸ್ತಾಪಿಸಿ ಪೋಷಕರಲ್ಲಿ ಜಾಗೃತಿ ಮೂಡಿಸಿದರು.
ವಿದ್ಯಾರ್ಥಿಗಳು ನೀಡುವ ಪ್ರತಿ ಪುಸ್ತಕಗಳು ಅವರ ಬೆಳವಣಿಗೆಯ ಸಂಕೇತವಾಗಿರುತ್ತದೆ. ಆದ್ದರಿಂದ, ಹುಟ್ಟುಹಬ್ಬದಂದು ಶಾಲೆಗೆ ಕಾಣಿಕೆಯಾಗಿ ನೀಡುವ ಪುಸ್ತಕದ ಒಳಗಿನ ಮೊದಲ ಪುಟದಲ್ಲಿ ವಿದ್ಯಾರ್ಥಿಯ ಹೆಸರು, ಜನ್ಮ ದಿನಾಂಕ ಮತ್ತು ವಿದ್ಯಾರ್ಥಿಯ ಒಂದು ಮಧುರವಾದ ಛಾಯಾಚಿತ್ರವನ್ನು ಅಂಟಿಸಿ ಕಳಿಸಿ. ಜೊತೆಗೆ ಮಗುವಿನ ಓದಿನ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ತಕ್ಕ ಪುಸ್ತಕವನ್ನು ಆರಿಸಿ ಎಂದು ಕೋರಿಕೊಂಡಿದ್ದರು.
ಹುಟ್ಟು ಹಬ್ಬದಂದು ವಿದ್ಯಾರ್ಥಿಗಳು ಶಾಲೆಗೆ ನೀಡುವ ಪುಸ್ತಕಗಳನ್ನು ಅಮೂಲ್ಯ ಕೊಡುಗೆ ಎಂದು ಪರಿಗಣಿಸಿ ಅವುಗಳನ್ನು ಪ್ರೀತಿಯಿಂದ ಸಂಗ್ರಹಿಸಿಡುತ್ತೇವೆ. ಇದರಿಂದ ಭವಿಷ್ಯದ ಪೀಳಿಗೆಗಳು ಓದಿನ ಅಭಿರುಚಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಅವರ ಜೀವನದಲ್ಲಿ ಆನಂದವನ್ನೂ ಕೊಡುತ್ತದೆ. ಅಲ್ಲದೆ ಪುಸ್ತಕಗಳನ್ನು ಇತರರಿಗೆ ಕಾಣಿಕೆಯಾಗಿ ನೀಡುವ ಪುಸ್ತಕ ಸಂಸ್ಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಎಲ್‌ಕೆಜಿಯಿಂದ ೭ನೇ ತರಗತಿಯವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಗಳು ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದಂದು ಪುಸ್ತಕಗಳನ್ನು ಕಾಣಿಕೆಯಾಗಿ ನೀಡುವ ಪರಂಪರೆಯನ್ನು ಮುಂದುವರಿಸಬೇಕು ಎಂಬ ಮುಖ್ಯ ಶಿಕ್ಷಕರ ಮಾತು ಶಾಲೆಯ ಪೋಷಕರನ್ನು ಹೆಚ್ಚು ಆಕರ್ಷಿಸಿತು.
ಇದೀಗ ಶಾಲೆಯ ಈ ಹೊಸತನಕ್ಕೆ ಸ್ಪಂದಿಸುತ್ತಿರುವ ಪೋಷಕರು ತಮ್ಮ ಮಕ್ಕಳ ಹುಟ್ಟು ಹಬ್ಬದಂದು ಶಾಲೆಗೆ ಚಾಕೊಲೆಟ್ ಕಳಿಸುವ ಬದಲು ಪುಸ್ತಕವೊಂದನ್ನು ಕಳಿಸುತ್ತಿದ್ದಾರೆ. ಇದನ್ನು ಪ್ರೀತಿಯಿಂದ ಸ್ವೀಕರಿಸುವ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ತಮಗೆ ಪುಸ್ತಕ ಹಸ್ತಾಂತರಿಸುವ ದೃಶ್ಯವನ್ನು ಸೆರೆ ಹಿಡಿದು ಶಾಲೆಯ ವ್ಯಾಟ್ಸಾö್ಯಪ್ ಗ್ರೂಪ್‌ಗಳಲ್ಲಿ ಹಾಕಿ ಬೇರೆ ವಿದ್ಯಾರ್ಥಿಗಳಿಗೂ ಪುಸ್ತಕ ಸಂಸ್ಕಾರದ ಕುರಿತು ಪ್ರೇರಣೆ ನೀಡುತ್ತಿದ್ದಾರೆ.
-ರಫೀಕ್ ತೂಚಮಕೇರಿ.