ಪೊನ್ನಂಪೇಟೆ, ಡಿ. ೨೩: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಹ ಪ್ರಾಯೋಜಕತ್ವದಲ್ಲಿ ವಿ. ಬಾಡಗದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೪ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-೨೦೨೫ರ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಕೊಂಗAಡ, ಕುಪ್ಪಂಡ, ಚೇಂದಿರ ಮತ್ತು ತೀತಿಮಾಡ ತಂಡಗಳು ಸೆಮಿ ಫೈನಲ್ ಪ್ರವೇಶಿಸಿವೆ.
ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬ ತಂಡಗಳಿಗಾಗಿ ನಡೆಯುತ್ತಿರುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರದAದು ಎದುರಾಳಿ ತಂಡಗಳೊAದಿಗೆ ಸೆಣಸಾಡಿದ ಈ ನಾಲ್ಕು ತಂಡಗಳು ಪ್ರಶಸ್ತಿ ಗೆಲ್ಲುವ ಹೆಗ್ಗುರಿಯೊಂದಿಗೆ ಸೆಮಿ ಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡವು.
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಂಗAಡ ತಂಡವು ಅಪ್ಪಂಡೇರAಡ ತಂಡವನ್ನು ೪-೧ ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಮೋಕ್ಷಿತ್ ೨ನೇ ಮತ್ತು ೨೦ನೇ ನಿಮಿಷದಲ್ಲಿ, ತಂಡದ ಆಟಗಾರ ರಚನ್ ೪೨ನೇ ಮತ್ತು ೪೮ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡವನ್ನು ಗೆಲುವಿನಂಚಿಗೆ ಕೊಂಡೊಯ್ದರು. ಪರಾಜಿತ ತಂಡದ ಪರವಾಗಿ ಅತಿಥಿ ಆಟಗಾರ ದೇಶ್ ಪೂವಯ್ಯ ೨೩ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.
೨ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕುಪ್ಪಂಡ ತಂಡವು ಕಳ್ಳಿಚಂಡ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ ೩೧ನೇ ನಿಮಿಷದಲ್ಲಿ ಅತಿಥಿ ಆಟಗಾರ ಅಯ್ಯಪ್ಪ, ೪೫ನೇ ನಿಮಿಷದಲ್ಲಿ ಮತ್ತೋರ್ವ ಅತಿಥಿ ಆಟಗಾರ ಧ್ಯಾನ್, ೪೮ನೇ ನಿಮಿಷದಲ್ಲಿ ದೇವಯ್ಯ ಮತ್ತು ೪೯ನೇ ನಿಮಿಷದಲ್ಲಿ ತಂಡದ ಕಾರ್ಯಪ್ಪ ಗೋಲು ದಾಖಲಿಸಿ ಗೋಲಿನ ಅಂತರ ಹೆಚ್ಚಿಸಿದರು. ೩ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೇoದಿರ ತಂಡವು ಮಳವಂಡ ತಂಡವನ್ನು ೩-೧ ಗೋಲುಗಳಿಂದ ಪರಾಭವಗೊಳಿಸಿ ಸೆಮಿ ಫೈನಲ್ ಗೆ ಪ್ರವೇಶಿಸಿತು. ಚೇಂದಿರ ತಂಡದ ಪರವಾಗಿ ೧೫ನೇ ನಿಮಿಷದಲ್ಲಿ ಅತಿಥಿ ಆಟಗಾರ ದೀಪಕ್, ೨೯ನೇ ಮತ್ತು ೩೩ನೇ ನಿಮಿಷದಲ್ಲಿ ಚಿಣ್ಣಪ್ಪ ಗೋಲು ಬಾರಿಸಿದರೆ, ಮಳವಂಡ ತಂಡದ ಪರವಾಗಿ ತಕ್ಷಿತ್ ೪೧ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತೀತಿಮಾಡ ತಂಡವು ಚೇಂದAಡ ತಂಡವನ್ನು ೪-೨ ಗೋಲುಗಳಿಂದ ಶೂಟೌಟ್ ನಲ್ಲಿ ಸೋಲಿಸಿ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿತು. ಪಂದ್ಯದ ದ್ವಿತೀಯಾರ್ಥದ ಅವಧಿ ಕೊನೆಗೊಳ್ಳುವಾಗ ಉಭಯ ತಂಡಗಳು ತಲಾ ಒಂದು ಫೀಲ್ಡ್ ಗೋಲು ದಾಖಲಿಸಿದ್ದರಿಂದ ಪಂದ್ಯ ಡ್ರಾಗೊಂಡಿತ್ತು. ಇದರಿಂದ ಶೂಟೌಟ್ ನಿಯಮಾವಳಿ ಅಳವಡಿಸಿ ಪಂದ್ಯದ ವಿಜಯ ನಿರ್ಣಯಿಸಬೇಕಾಯಿತು. ಈ ವೇಳೆ ವಿಜೇತ ತೀತಿಮಾಡ ತಂಡದ ಪರವಾಗಿ ೩ ಗೋಲುಗಳು ದಾಖಲಾದರೆ, ಪರಾಜಿತ ತಂಡದ ಪರವಾಗಿ ಏಕೈಕ ಗೋಲು ದಾಖಲಾಯಿತು. ಇದಕ್ಕೂ ಮೊದಲು ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ನಿತಿನ್ ೧೩ನೇ ನಿಮಿಷದಲ್ಲಿ ಮತ್ತು ಪರಾಜಿತ ತಂಡದ ಪರ ಅತಿಥಿ ಆಟಗಾರ ಪೊನ್ನಣ್ಣ ೪೨ನೇ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿದ್ದರು. - ರಫೀಕ್ ತೂಚಮಕೇರಿ