ಸೋಮವಾರಪೇಟೆ, ಡಿ. ೨೭: ತಾಲೂಕಿನ ಯಡವನಾಡು ಮೀಸಲು ಅರಣ್ಯಕ್ಕೆ ಒಳಪಡುವ ಹುದುಗೂರು ಶಾಖಾ ವ್ಯಾಪ್ತಿಯ ಕಾಜೂರು ಮೀಸಲು ಅರಣ್ಯದಲ್ಲಿ ತೇಗದ ಮರಗಳನ್ನು ಕಡಿದು ಸಾಗಿಸಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಕಾಜೂರಿನ ಅರಣ್ಯದಿಂದ ಕಡಿದು ಹಾರಂಗಿ ಹಿನ್ನೀರು ಪ್ರದೇಶದ ಕಾಡಿನಲ್ಲಿ ಅಡಗಿಸಿಟ್ಟಿದ್ದ ತೇಗದ ನಾಟಾಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಜೂರು ಮೀಸಲು ಅರಣ್ಯದಲ್ಲಿ ಭಾರೀ ಪ್ರಮಾಣದ ತೇಗದ ಮರಗಳು ಹನನವಾಗಿವೆ ಎಂಬ ಸಂಶಯದ ನಡುವೆಯೇ, ಇಷ್ಟೊಂದು ದೊಡ್ಡಮಟ್ಟದಲ್ಲಿ ಮರ ಕಳ್ಳತನ ನಡೆಯಲು ಇಲಾಖೆಯೊಳಗಿರುವ ಖದೀಮನ ಬೆಂಬಲವಿತ್ತೇ? ಎಂಬ ಸಂಶಯಕ್ಕೆ ಸಾಕ್ಷಿ ಎಂಬAತೆ ಆರ್‌ಆರ್‌ಟಿ ಸಿಬ್ಬಂದಿಯೋರ್ವ ಇಂದಿಗೂ ತಲೆಮರೆಸಿಕೊಂಡಿದ್ದಾನೆ!
ಕಳೆದ ತಾ. ೧೩.೧೨.೨೦೨೫ರ ರಾತ್ರಿ ಕಾಜೂರು ಮೀಸಲು ಅರಣ್ಯದಲ್ಲಿ ೭ ತೇಗದ ಮರಗಳನ್ನು ಕಳವು ಮಾಡುತ್ತಿದ್ದ ಸಂದರ್ಭ ಲಭಿಸಿದ ಮಾಹಿತಿಯಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಧಾಳಿ ನಡೆಸಿ, ಓರ್ವನನ್ನು ಬಂಧಿಸಿದ್ದರೆ, ಉಳಿದ ೫ ಮಂದಿ ತಲೆಮರೆಸಿಕೊಂಡಿದ್ದರು. ಒಟ್ಟು ೬ ಆರೋಪಿಗಳ ವಿರುದ್ಧ ಈ ಹಿಂದೆ ಅರಣ್ಯ ಇಲಾಖಾಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡಿದ್ದರು. ಇದೀಗ ವಿಚಾರಣೆ ನಡೆಯುತ್ತಿರುವಂತೆ ಆರೋಪಿಗಳ ಸಂಖ್ಯೆ ೮ಕ್ಕೆ ಏರಿಕೆಯಾಗಿದ್ದರೆ, ಇದರಲ್ಲಿ ಆರ್‌ಆರ್‌ಟಿ ಸಿಬ್ಬಂದಿಯೂ ಸೇರಿರುವುದು ಸೋಜಿಗವಾಗಿದೆ!
ಮೀಸಲು ಅರಣ್ಯದಿಂದ ತೇಗದ ಮರಕಳ್ಳತನ ನಡೆಸಿದ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದಡಿ ಯಡವಾರೆ ಗ್ರಾಮದ ಸಂತೋಷ್, ಅಶ್ವಥ್, ನಿತೀನ್, ಕೊಡ್ಲಿಪೇಟೆ ಅರಕನಹಳ್ಳಿಯ ಸಯ್ಯದ್ ಜಹೀರ್, ಕುಶಾಲನಗರ ರಸಲ್‌ಪುರದ ವಿ.ಎಂ. ಷರೀಪ್, ಐಗೂರು ಗ್ರಾಮದ ಅಕ್ಷಯ್ ಅವರುಗಳ ವಿರುದ್ಧ ಈ ಹಿಂದೆ ಮೊಕದ್ದಮೆ ದಾಖಲಾಗಿದ್ದು, ಕಾರ್ಯಾಚರಣೆ ಸಂದರ್ಭ ಸಂತೋಷ್ ಸ್ಥಳದಲ್ಲಿಯೇ ಅರಣ್ಯ ಇಲಾಖಾಧಿಕಾರಿಗಳ ವಶವಾಗಿದ್ದ. ಇದೀಗ ಬಹುತೇಕ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಹೆಚ್ಚಿನ ವಿಚಾರಣೆಗಾಗಿ ಕೆಲ ಆರೋಪಿಗಳನ್ನು ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದಿದ್ದಾರೆ.
ಅದರಂತೆ ಪ್ರಕರಣದ ಪ್ರಮುಖ ಆರೋಪಿಗಳೆಂದು ಗುರುತಿಸಿರುವ ಅಶ್ವಥ್ ಹಾಗೂ ಸಂತೋಷ್ ಅವರುಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಹಾರಂಗಿ ಹಿನ್ನೀರಿನ ಬಳಿಯ ಕಾಡಿನಲ್ಲಿ ಅಡಗಿಸಿಟ್ಟಿದ್ದ ೧೬ ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಈವರೆಗೆ ಒಟ್ಟು ೫೯ ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ.
ತಲೆಮರೆಸಿಕೊಂಡ ಆರ್‌ಆರ್‌ಟಿ ಸಿಬ್ಬಂದಿ : ಕಾಜೂರು ಅರಣ್ಯದಿಂದ ತೇಗದ ಮರ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರ್‌ಆರ್‌ಟಿ ಸಿಬ್ಬಂದಿಯೋರ್ವ ತಲೆಮರೆಸಿಕೊಂಡಿದ್ದಾನೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆರಂಭದ ದಿನದಲ್ಲಿ ಎಸಿಎಫ್ ಎದುರಿನ ವಿಚಾರಣೆಗೆ ಹಾಜರಾಗಿದ್ದ ವಿನೋದ್ ಎಂಬಾತ, ನಂತರ ನಾಪತ್ತೆಯಾಗಿರುವುದು ಸಂಶಯವನ್ನು ಇಮ್ಮಡಿಗೊಳಿಸಿದೆ.
ಕಳೆದ ೯ ವರ್ಷಗಳಿಂದ ಕಾಜೂರು ಅರಣ್ಯ ವ್ಯಾಪ್ತಿಯಲ್ಲಿ ಆರ್‌ಆರ್‌ಟಿ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದ ವಿನೋದ್, ಪ್ರಕರಣ ಬೆಳಕಿಗೆ ಬಂದ ನಂತರ ಎಸಿಎಫ್ ಗೋಪಾಲ್ ಅವರ ಕಚೇರಿಯಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದ. ಆರಂಭದಲ್ಲಿ ಈತನ ಮೇಲೆ ಯಾವುದೇ ಸಂಶಯ ಇರದ ಹಿನ್ನೆಲೆ, ಇನ್ನಿತರ ಸಿಬ್ಬಂದಿಗಳ ವಿಚಾರಣೆಗಾಗಿ ಕಚೇರಿಯಿಂದ ಹೊರಗೆ ಇರುವಂತೆ ಅಧಿಕಾರಿಗಳು ತಿಳಿಸಿದ್ದರು. ಇದನ್ನೇ ಅವಕಾಶವನ್ನಾಗಿಸಿಕೊಂಡ ವಿನೋದ್ ಕಚೇರಿಯಿಂದ ಹೊರಬಂದವನು ನಂತರ ನಾಪತ್ತೆಯಾಗಿದ್ದಾನೆ. ಆ ಮೂಲಕ ಕೃತ್ಯದಲ್ಲಿ ಈತನ ಭಾಗವಹಿಸುವಿಕೆಯ ಸಂಶಯವನ್ನು ಇನ್ನಷ್ಟು ಬಲವಾಗಿಸಿದ್ದಾನೆ.
ನಂತರ ಈತನ ಮೊಬೈಲ್ ಕರೆಗಳ ಸಿಡಿಆರ್ ಪರಿಶೀಲನೆ ಸಂದರ್ಭ ತೇಗದ ಮರ ಕಳವು ಮಾಡಿದ ಇತರ ಆರೋಪಿಗಳೊಂದಿಗೆ ನಿರಂತರ ಸಂಪರ್ಕ ಇರುವುದು ಕಂಡುಬAದಿದೆ. ಹೀಗಾಗಿ ವಿನೋದ್ ವಿರುದ್ಧವೂ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. (ಕೃತ್ಯದಲ್ಲಿ ಸ್ಥಳೀಯ ಆರ್‌ಆರ್‌ಟಿ ಸಿಬ್ಬಂದಿಯ ಪಾತ್ರ ಇರುವ ಬಗ್ಗೆ ತಾ. ೧೯ರ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು)
ಮತ್ತೋರ್ವನ ವಶ: ಈ ಪ್ರಕರಣಕ್ಕೆ ಸಂಬAಧಿಸಿದAತೆ ವಿಚಾರಣೆ ನಡೆಸುತ್ತಿರುವ ಅರಣ್ಯಾಧಿಕಾರಿಗಳಿಗೆ ಮತ್ತೋರ್ವ ಆರೋಪಿಯ ಬಗ್ಗೆ ಬಂದಿತ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಕುಂಬೂರು ಗ್ರಾಮದ ಅರ್ಚನ್ ಎಂಬಾತನೂ ಈ ಕೃತ್ಯದಲ್ಲಿರುವ ಸಂಶಯದ ಮೇರೆ ಆತನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ವಿಚಾರಣೆ ತೀವ್ರಗೊಳಿಸಿದ್ದಾರೆ.
೨೫ ಮರಗಳ ಹನನ: ಒಟ್ಟಾರೆಯಾಗಿ ಕಾಜೂರು ಅರಣ್ಯದಿಂದ ೨೫ ಮರಗಳು ಹನನವಾಗಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಕಳೆದ ತಾ. ೧೩ರಂದು ೭ ಮರಗಳ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ತನಿಖೆ ಸಂದರ್ಭ ಹಳೆಯ ೧೮ ಗುತ್ತಿಗಳು ಪತ್ತೆಯಾಗಿವೆ. ಈ ಗುತ್ತಿಗಳ ಬಗ್ಗೆಯೂ ತನಿಖೆ ಮುಂದುವರೆಯುತ್ತಿದೆ.
ಮೀಸಲು ಅರಣ್ಯದಿಂದ ನಿರಂತರವಾಗಿ, ಅದೂ ಸಹ ಆರ್‌ಆರ್‌ಟಿ ಸಿಬ್ಬಂದಿಯ ಸಹಾಯದಿಂದಲೇ ಮರಗಳನ್ನು ಕಳವು ಮಾಡುತ್ತಿದ್ದುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅರಣ್ಯದಲ್ಲಿ ಕೂಂಬಿAಗ್ ನಡೆಸಿದರೆ ಇನ್ನಷ್ಟು ಪ್ರಕರಣ ಬೆಳಕಿಗೆ ಬರಬಹುದು ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಉನ್ನತಮಟ್ಟದ ತನಿಖೆ: ಕೃತ್ಯ ನಡೆದ ಸ್ಥಳಕ್ಕೆ ಹುದುಗೂರು ಹಾಗೂ ಮಾದಾಪುರ ಶಾಖೆಗಳು ಒಳಪಡುತ್ತಿದ್ದು, ಈ ಎರಡೂ ಶಾಖೆಗಳ ತಲಾ ಓರ್ವ ಫಾರೆಸ್ಟರ್, ಓರ್ವ ಗಾರ್ಡ್, ರ‍್ಯಾಪಿಡ್ ರೆಸ್ಪಾನ್ಸ್ ಟೀಂನ ನಾಲ್ಕು ಹಾಗೂ ಎಲಿಫೆಂಟ್ ಟಾರ್ಸ್ಕ್ ಫೋರ್ಸ್ನ ನಾಲ್ವರು ಸಿಬ್ಬಂದಿಗಳು ಸೇರಿದಂತೆ ಒಟ್ಟು ೧೨ ಮಂದಿಯ ವಿರುದ್ಧ ಇಲಾಖಾ ಮಟ್ಟದಲ್ಲಿ ಉನ್ನತ ಮಟ್ಟದ ಆಂತರಿಕ ತನಿಖೆ ನಡೆದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಅವರ ಆದೇಶದಂತೆ ವಿಜಿಲೆನ್ಸ್ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ ಅವರು ತನಿಖೆ ನಡೆಸಿದ್ದು, ಅಂತಿಮ ವರದಿ ಸಲ್ಲಿಕೆಯಾಗಬೇಕಿದೆ. ಅರಣ್ಯ ರಕ್ಷಣೆಯ ಜವಾಬ್ದಾರಿಯನ್ನು ಸ್ಥಳೀಯ ಮಟ್ಟದಲ್ಲಿ ಹೊತ್ತಿರುವ ಫಾರೆಸ್ಟರ್, ಗಾರ್ಡ್ ಸೇರಿದಂತೆ ಇತರ ಸಿಬ್ಬಂದಿಗಳ ಕಾರ್ಯವೈಖರಿ ಹೇಗಿತ್ತು? ಪ್ರಕರಣದಲ್ಲಿ ಇವರುಗಳ ಪಾತ್ರ ಇದೆಯೇ, ಕರ್ತವ್ಯ ಲೋಪವಾಗಿದೆಯೇ ಎಂಬ ಬಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ ಅವರು ವರದಿ ನೀಡಲಿದ್ದಾರೆ.
ಈಗಾಗಲೇ ಅಧಿಕಾರಿ, ಸಿಬ್ಬಂದಿಗಳು ಮುಖತಃ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಇನ್ನು ತೇಗದ ಮರ ಕಳವು ಆರೋಪಿಗಳೊಂದಿಗೆ ಅಧಿಕಾರಿಗಳಿಗೆ ಸಂಪರ್ಕವಿತ್ತೇ? ಘಟನೆ ನಡೆದ ದಿನಾಂಕಗಳAದು ಅಧಿಕಾರಿ-ಸಿಬ್ಬಂದಿಗಳು ಎಲ್ಲಿದ್ದರು? ಹೇಗಿದ್ದರು? ಎಂಬಿತ್ಯಾದಿ ಮಾಹಿತಿಗಳನ್ನು ತನಿಖಾಧಿಕಾರಿ ಬಯಲುಗೊಳಿಸಬೇಕಿದೆ.
ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ತೇಗದ ನಾಗಾಟಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶೈಲೇಂದ್ರ, ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್, ಗಸ್ತು ಅರಣ್ಯ ಪಾಲಕ ಚಂದ್ರಶೇಖರ್, ಹೊರಗುತ್ತಿಗೆ ನೌಕರ ಅಯ್ಯಪ್ಪ, ಜೀವನ್, ಚಾಲಕ ನಂದೀಶ್ ಅವರುಗಳು ಭಾಗವಹಿಸಿದ್ದರು.
- ಸತ್ಯದೇವ್