ಸೋಮವಾರಪೇಟೆ, ಡಿ. ೨೭: ಇಲ್ಲಿನ ತಾಲೂಕು ಕಚೇರಿಯಲ್ಲಿ ಗಣಗೂರು ಗ್ರಾಮ ಪಂಚಾಯಿತಿ ಸರ್ಕಲ್ ವ್ಯಾಪ್ತಿಯ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ರಾಜೇಶ್(೩೫) ಎಂಬವರು ಕಾಸರಗೋಡಿನಲ್ಲಿ ರೈಲಿಗೆ ಸಿಲುಕಿ ಧಾರುಣ ಅಂತ್ಯ ಕಂಡ ಘಟನೆ ನಡೆದಿದೆ.
ಗಣಗೂರು ಗ್ರಾಮ ನಿವಾಸಿ ಚನ್ನಯ್ಯ ಅವರ ಪುತ್ರರಾಗಿರುವ ರಾಜೇಶ್, ತಾಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿ ಕಳೆದ ೧೨ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ದಿನಗಳ ಹಿಂದೆ ದಿಡೀರಾಗಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿದ್ದರು.
ಮನೆಯಿಂದಲೂ ನಾಪತ್ತೆಯಾಗಿದ್ದ ಇವರ ಪತ್ತೆಗೆ ತಂದೆ ಚನ್ನಯ್ಯ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಮಂಗಳೂರಿನಲ್ಲಿದ್ದ ರಾಜೇಶ್ ಅವರನ್ನು ಪತ್ತೆಹಚ್ಚಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ಕರೆತಂದು, ಮನೆಯವರಿಗೆ ಒಪ್ಪಿಸಿದ್ದರು.
ಕೆಲ ದಿನಗಳ ಕಾಲ ಮನೆಯಲ್ಲಿಯೇ ಇದ್ದ ರಾಜೇಶ್, ಮತ್ತೆ ಮಂಗಳೂರಿಗೆ ತೆರಳಿದ್ದು, ತಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಸಂಬಳ ಪಡೆದುಕೊಂಡು ಬರುವುದಾಗಿ ಮನೆಯವರಿಗೆ ಹೇಳಿದ್ದರು. ನಿನ್ನೆ ದಿನ ಕಾಸರಗೋಡಿನಲ್ಲಿ ರೈಲ್ವೇ ಹಳಿ ದಾಟುತ್ತಿದ್ದ ಸಂದರ್ಭ ಸಂಭವಿಸಿದ ಅವಘಡಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ನಿನ್ನೆ ಮಧ್ಯಾಹ್ನದ ವೇಳೆಗೆ ಮಂಗಳೂರು-ಕೊಯಮತ್ತೂರು ಇಂಟರ್‌ಸಿಟಿ ರೈಲಿನಿಂದ ಇಳಿದ ನಂತರ ರಾಜೇಶ್ ಹಳಿ ದಾಟುತ್ತಿದ ಸಂದರ್ಭ, ಮಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ರಾಜೇಶ್ ಅವರ ದೇಹದ ಒಂದು ಭಾಗ ಗೂಡ್ಸ್ ರೈಲಿನಲ್ಲಿಯೇ ಸಿಲುಕಿಕೊಂಡಿದ್ದು, ಮುಂದಿನ ನಿಲ್ದಾಣವಾದ ಕುಂಬಳ ಪ್ರದೇಶದಲ್ಲಿ ರೈಲು ನಿಲುಗಡೆಯಾದ ಸಂದರ್ಭ ಪತ್ತೆಯಾಗಿದೆ.
ಛಿದ್ರಗೊಂಡಿದ್ದ ಮೃತದೇಹವನ್ನು ಒಂದುಗೂಡಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಇರಿಸಿದ್ದು, ರಾಜೇಶ್ ಧರಿಸಿದ್ದ ಪ್ಯಾಂಟ್ ಜೇಬಿನೊಳಗೆ ಇದ್ದ ಆಧಾರ್ ಕಾರ್ಡ್ ಮೂಲಕ ಕುಟುಂಬದವರನ್ನು ಪತ್ತೆಹಚ್ಚಿ ಮಾಹಿತಿ ನೀಡಲಾಗಿದ್ದು, ಕುಟುಂಬಸ್ಥರು ಕಾಸರಗೋಡಿಗೆ ತೆರಳಿ, ಮೃತದೇಹದ ಗುರುತು ಪತ್ತೆಹಚ್ಚಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಗಣಗೂರು ವೃತ್ತದ ಗ್ರಾಮ ಸಹಾಯಕರಾಗಿದ್ದ ಚನ್ನಯ್ಯ ಅವರು ಅನಾರೋಗ್ಯದಿಂದ ಕರ್ತವ್ಯದಿಂದ ಬಿಡುಗಡೆಯಾದ ನಂತರ ಪುತ್ರ ರಾಜೇಶ್ ಕಳೆದ ೧೨ ವರ್ಷದಿಂದ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ದಿಢೀರಾಗಿ ಅನಧಿಕೃತ ಗೈರು ಹಾಜರಾದ ಹಿನ್ನೆಲೆ ಕಂದಾಯ ಇಲಾಖೆಯಿಂದ ನೋಟೀಸ್ ನೀಡಲಾಗಿತ್ತು. ಆದರೂ ಸಹ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.
ಮನೆಯಿಂದ ನಾಪತ್ತೆಯಾಗಿದ್ದ ರಾಜೇಶ್‌ನನ್ನು ಪತ್ತೆಹಚ್ಚಿ ಕೊಡುವಂತೆ ತಂದೆ ಚನ್ನಯ್ಯ ಪೊಲೀಸ್ ದೂರು ನೀಡಿದ್ದರು. ತನಿಖೆ ಸಂದರ್ಭ ಮಂಗಳೂರಿನಲ್ಲಿದ್ದ ರಾಜೇಶ್ ಮನೆಯವರೊಂದಿಗೆ ಮೊಬೈಲ್ ಮೂಲಕ ಸಂಪರ್ಕ ಹೊಂದಿರುವುದು ತಿಳಿದುಬಂದಿತ್ತು. ಮಂಗಳೂರಿಗೆ ತೆರಳಿದ ಪೊಲೀಸರು ರಾಜೇಶ್‌ನನ್ನು ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿ ದೂರು ಮುಕ್ತಾಯಗೊಳಿಸಿದ್ದರು.
ಈ ನಡುವೆ ರಾಜೇಶ್ ಗ್ರಾಮ ಸಹಾಯಕ ಕೆಲಸಕ್ಕೆ ರಜೆ ಹಾಕಿ ಮಂಗಳೂರಿಗೆ ತೆರಳಿದ್ದರು. ನಿನ್ನೆ ದಿನ ಕಾಸರಗೋಡಿನಲ್ಲಿ ನಡೆದ ಅವಘಡದಲ್ಲಿ ಅಸುನೀಗಿದ್ದಾರೆ. ಛಿದ್ರಗೊಂಡಿದ್ದ ಮೃತಹೇಹವನ್ನು ಅಲ್ಲಿನ ಪೊಲೀಸರು ಸಂಗ್ರಹಿಸಿ, ಆಸ್ಪತ್ರೆಗೆ ಸಾಗಿಸಿದ್ದು, ಇಂದು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಮೃತ ರಾಜೇಶ್ ಪೋಷಕರೊಂದಿಗೆ ಪತ್ನಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ.