ಕುಶಾಲನಗರ, ಡಿ. ೨೭: ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಗಳ ಅಳವಡಿಕೆ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣವಾಗಲು ಸಹಕಾರಿಯಾಗುತ್ತದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ. ದಿನೇಶ್ ಕುಮಾರ್ ಹೇಳಿದರು.

ಕುಶಾಲನಗರ ಗುಮ್ಮನಕೊಲ್ಲಿ ಬಸವೇಶ್ವರ ಬಡಾವಣೆ, ಬಯಲು ಬಸವೇಶ್ವರ ದೇವಾಲಯ ಸಮಿತಿ ಕುಶಾಲನಗರದ ವ್ಯಾಪ್ತಿಯ ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಉದ್ಘಾಟನೆ ಮತ್ತು ಅದರ ನಿರ್ವಹಣೆಗಾಗಿ ಪೊಲೀಸ್ ಇಲಾಖೆ ಮತ್ತು ಪುರಸಭೆಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಪರಾಧಗಳನ್ನು ಪತ್ತೆಹಚ್ಚಲು ಸಿಸಿ ಕ್ಯಾಮೆರಾ ಮಹತ್ತರ ಪಾತ್ರ ವಹಿಸುತ್ತಿದೆ ಎಂದ ಅವರು, ಪ್ರತಿಯೊಬ್ಬರು ತಮ್ಮ ಮನೆ, ವ್ಯಾಪಾರ ವಹಿವಾಟು ಮಾಡುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಆ ಮೂಲಕ ಅಪರಾಧ ತಡೆ ಸಾಧ್ಯ ಎಂದರು.

ಸಮಿತಿ ಮೂಲಕ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಸಾರ್ವಜನಿಕವಾಗಿ ಅಳವಡಿಸಿ ಸ್ವಚ್ಛ ಹಾಗೂ ಸ್ವಸ್ಥ ಸಮಾಜ ನಿರ್ಮಾಣದ ಗುರಿಯೊಂದಿಗೆ ಸಮಾಜಮುಖಿ ಸೇವೆ ಸಲ್ಲಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕುಶಾಲನಗರ ಡಿವೈಎಸ್‌ಪಿ ಚಂದ್ರಶೇಖರ್ ಪಿ. ಮಾತನಾಡಿ, ಪೊಲೀಸ್ ಇಲಾಖೆಯೊಂದಿಗೆ ನಾಗರಿಕರ ಸಹಭಾಗಿತ್ವದ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ. ಚಂದ್ರಕಲಾ, ಸಮಿತಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಯೊಬ್ಬರೂ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಕೆ. ಸುದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪೌರಕಾರ್ಮಿಕರಾದ ಸತೀಶ್ ಮತ್ತು ರಾಜೇಶ್ವರಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂದಾಜು ರೂ. ೨೦ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹಾರಂಗಿ ರಸ್ತೆ, ಗುಡ್ಡೆಹೊಸೂರು ಹೆದ್ದಾರಿ ಜಂಕ್ಷನ್, ಕೂಡಿಗೆ ರಸ್ತೆಯ ಕೈಗಾರಿಕಾ ಬಡಾವಣೆ, ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕ್ಯಾಮೆರಗಳನ್ನು ಅಳವಡಿಸಲಾಗಿದೆ ಎಂದು ಅಧ್ಯಕ್ಷ ಸುದೀಪ್ ಕುಮಾರ್ ಮಾಹಿತಿ ನೀಡಿದರು. ಹಾರಂಗಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಪ್ರಕರಣಗಳು ಈ ಮೂಲಕ ಪತ್ತೆಹಚ್ಚಲಾಗಿದ್ದು ಇದೀಗ ಶೇ. ೧೦೦ ರಷ್ಟು ಸ್ವಚ್ಛತೆ ಕಂಡು ಬಂದಿದೆ ಎಂದರು. ಹೆದ್ದಾರಿಯಲ್ಲಿ ಸಾಗುವ ಪ್ರತಿ ವಾಹನಗಳ ನೋಂದಣಿ ಸಂಖ್ಯೆ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗುವ ಮೂಲಕ ಅಪರಾಧ ಪತ್ತೆ ಕಾರ್ಯ ಸುಸೂತ್ರವಾಗಿ ನಡೆಯಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುರಸಭೆಯ ಕಂದಾಯ ಅಧಿಕಾರಿ ರಾಮು, ಎಸ್‌ಎಲ್‌ಎನ್ ಕಾಫಿ ಸಂಸ್ಥೆಯ ಮಾಲೀಕ ಎನ್. ಸಾತಪ್ಪನ್, ಕಾಫಿ ಉದ್ಯಮಿ ಈಶ್ವರನ್ ಜವಾಹರ್ ಮತ್ತಿತರರು ಇದ್ದರು.

ಕುಶಾಲನಗರ ಸುತ್ತಮುತ್ತ ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರ ವ್ಯವಸ್ಥೆ ಕಲ್ಪಿಸಲು ಕೈಜೋಡಿಸಿದ ಕುಶಾಲನಗರ ಕೈಗಾರಿಕಾ ಬಡಾವಣೆಯಲ್ಲಿರುವ ೨೫ಕ್ಕೂ ಅಧಿಕ ಉದ್ಯಮಿಗಳಿಗೆ ಮತ್ತು ಈ ಸಂದರ್ಭ ಸಹಕರಿಸಿದ ಸಿ.ಸಿ. ಕ್ಯಾಮೆರಾ ತಂತ್ರಜ್ಞ ರಜನಿಕಾಂತ್ ಮತ್ತು ಸ್ಥಳೀಯರಿಗೆ ಸಮಿತಿ ಪರವಾಗಿ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಸಮಿತಿಯ ಕಾರ್ಯದರ್ಶಿ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ನಿರ್ದೇಶಕರು ಮತ್ತು ಬಡಾವಣೆಯ ನಿವಾಸಿಗಳು ಇದ್ದರು.