ಮಡಿಕೇರಿ, ಡಿ. ೨೭: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ವಾಸವಿ ಸಪ್ತಾಹ-೨೦೨೬ ಜ. ೨ ರಿಂದ ೮ ರವರೆಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ೧೯೪೭ರಲ್ಲಿ ಶ್ರೀ ಮೈಲಾರ ಶೆಟ್ಟರ ಅಧ್ಯಕ್ಷತೆಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯ ೨೦೧೪ರಲ್ಲಿ ನಡೆಯಿತು. ಪುನರ್ ಪ್ರತಿಷ್ಠಾಪನೆಗೊಂಡ ದೇವಸ್ಥಾನದಲ್ಲಿ ೧೨ ವರ್ಷಗಳಿಗೊಮ್ಮೆ ನಡೆಯಬೇಕಾದ ಪೂಜಾ ಕಾರ್ಯಗಳು, ಕುಂಬಾಭಿಷೇಕ, ಬ್ರಹ್ಮ ಕಲಶೋತ್ಸವ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಜ. ೨೯ ರಿಂದ ಫೆ. ೨ ರವರೆಗೆ ಜರುಗಲಿದೆ ಎಂದು ತಿಳಿಸಿದರು.
ಬ್ರಹ್ಮ ಕಲಶೋತ್ಸವದ ಹಿನ್ನೆಲೆಯಲ್ಲಿ ವಾಸವಿ ಸಪ್ತಾಹವನ್ನು ಕುಶಾಲನಗರದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಸಪ್ತಾಹದ ಆರಂಭಿಕ ದಿನವಾದ ಜ. ೨ ರಂದು ಬೆಳಿಗ್ಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ವಾಕಥಾನ್ ಮತ್ತು ಸೈಕಥಾನ್ಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ೭ ಗಂಟೆಗೆ ಹೊಟೇಲ್ ಅತಿಥಿ ಕಂಫರ್ಟ್ಸ್ ಮುಂಭಾಗದಿAದ ಆರಂಭಗೊಳ್ಳಲಿದೆ. ಅದೇ ದಿನ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಹೊಟೇಲ್ ಕನ್ನಿಕಾ ಇಂಟರ್ನ್ಯಾಷನಲ್ನ ಕನ್ನಿಕಾ ಕನ್ವೆನ್ಷನ್ ಸೆಂಟರ್ನಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೪ ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜ. ೩ ರಂದು ಆರ್ಯವೈಶ್ಯ ಮಹಿಳಾ ಮಂಡಳಿಯ ಸಹಕಾರದೊಂದಿಗೆ ಬೆಳಿಗ್ಗೆ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ, ಮಧ್ಯಾಹ್ನ ಕೂಡಿಗೆಯ ಶಕ್ತಿ ವೃದ್ಧಾಶ್ರಮದ ಹಿರಿಯರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಅದೇ ದಿನ ಸಂಜೆ ಕಾವೇರಿ ಮಹಾ ಆರತಿ ಬಳಗದ ಸಹಯೋಗದೊಂದಿಗೆ ಕಾವೇರಿಗೆ ೧೮೧ನೇ ಮಹಾಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ವಂದೇ ಮಾತರಂ ರಾಷ್ಟಿçÃಯ ಗೀತೆಯ ೧೫೦ನೇ ವರ್ಷದ ಅಂಗವಾಗಿ ವಂದೇ ಮಾತರಂ ಗೀತ ಗಾಯನ ಮತ್ತು ಭಜನೆ ನಡೆಯಲಿದೆ.
ಜ. ೪ ರಂದು ರಾಜ್ಯಮಟ್ಟದ ವಾಸವಿ ಬ್ಯಾಡ್ಮಿಂಟನ್ ಪಂದ್ಯಾವಳಿ ಕುಶಾಲನಗರದ ಜಂಪ್ ಸ್ಮ್ಯಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
೧೧೪ ವೃಕ್ಷಾರೋಪಣ-ಜ. ೫ ರಂದು ೧೧೪ ವರ್ಷಗಳ ಕಾಲ ನಮ್ಮೊಂದಿಗಿದ್ದ ಸಾಲುಮರದ ತಿಮ್ಮಕ್ಕನವರ ಸ್ಮರಣೆಯಲ್ಲಿ ೧೧೪ ಗಿಡಗಳನ್ನು ನೆಡುವ ಮೂಲಕ, ಲಕ್ಷ ವೃಕ್ಷ'ಗಿಡ ನೆಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು ಎಂದರು.
ಜ. ೬ ರಂದು ವಾಸವಿ ಯುವತಿಯರ ಸಂಘದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಮತ್ತು ಸ್ವಯಂ ರಕ್ಷಣೆ ಜಾಗೃತಿ ಮೂಡಿಸುವ ಶಿಬಿರ ಕುಶಾಲನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ.
ಜ. ೭ ರಂದು ವಾಸವಿ ಕ್ಲಬ್ನ ಸಹಯೋಗದೊಂದಿಗೆ ಯುವ ಸಮೂಹಕ್ಕೆ ಉಪಯುಕ್ತವಾದ ಎಂಎಸ್ಎAಇ ಕಾರ್ಯಾಗಾರವನ್ನು ಕುಶಾಲನಗರದ ಪಾಳ್ಯಂ ಎಮರಾಲ್ಡ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಜ. ೮ ರಂದು ಸದೃಢ ಭಾರತಕ್ಕಾಗಿ ವಿದ್ಯಾರ್ಥಿಗಳ ಪಾತ್ರ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಮತ್ತು ಹಳ್ಳಿ ಜೀವನ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಆಯ್ದ ಶಾಲಾ ವಿದ್ಯಾರ್ಥಿಗಳಿಗೆ ಪಾಳ್ಯಂ ಎಮರಾಲ್ಡ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಗೇಂದ್ರ ಪ್ರಸಾದ್ ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಕೆ. ಪ್ರವೀಣ್, ಖಜಾಂಚಿ ಪಿ.ಎಸ್. ಪ್ರಶಾಂತ್, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ. ಅಮೃತ್ ರಾಜ್, ವಾಸವಿ ಸಪ್ತಾಹ ಕಾರ್ಯಕ್ರಮದ ಯೋಜನಾ ನಿರ್ದೇಶಕ ಎ.ಎಸ್. ಕುಮಾರ್ ಉಪಸ್ಥಿತರಿದ್ದರು.