ಚೆಯ್ಯಂಡಾಣೆ, ಡಿ. ೨೮: ಸಮೀಪದ ಕಕ್ಕಬ್ಬೆ-ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಯಕೋಲ್ ಗ್ರಾಮದ ತೋಟಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಮನೆಯೊಂದರ ಅಂಗಳಕ್ಕೆ ಪ್ರವೇಶಿಸಿದ ಕಾಡಾನೆ ಮನೆಯ ಆವರಣಗೋಡೆ ತುಳಿದು ಧ್ವಂಸಗೊಳಿಸಿದೆ.

ವಯಕೋಲ್ ಗ್ರಾಮದ ನಿವಾಸಿ ಅಹ್ಮದ್ ಹಾಜಿ ಎಂಬವರ ಮನೆಯ ಅಂಗಳಕ್ಕೆ ಮಧ್ಯರಾತ್ರಿ ಲಗ್ಗೆಯಿಟ್ಟ ಕಾಡಾನೆ ಮನೆಯ ಹಿಂಬದಿಯ ತಡಗೋಡೆ ತುಳಿದು ಧ್ವಂಸಗೊಳಿಸಿದೆ. ಈ ವ್ಯಾಪ್ತಿಯ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಗ್ರಾಮದ ತೋಟಗಳಲ್ಲಿ ಕಾಫಿ ಕೊಯ್ಲು ಕಾರ್ಯ ಪ್ರಾರಂಭವಾಗಿದ್ದು, ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ಹಾಗೂ ಬೆಳೆಗಾರರು ತೋಟಗಳಿಗೆ ತೆರಳಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಡಲೇ ಸಂಬAಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಇಲಾಖೆಯನ್ನು ಒತ್ತಾಯಿಸಿದ್ದಾರೆ.