ಸೋಮವಾರಪೇಟೆ, ಡಿ. ೨೮: ಭೂಲೋಕದ ಸ್ವರ್ಗದಂತಿರುವ ಕೊಡಗು ಕೊಡಗಾಗಿಯೇ ಉಳಿಯಬೇಕಾದರೆ ಇಲ್ಲಿನವರು ಯಾವುದೇ ಕಾರಣಕ್ಕೂ ಹೊರಗಿನವರಿಗೆ ತಮ್ಮ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಕರೆ ನೀಡಿದರು.

ಇಲ್ಲಿನ ಕೊಡವ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಪುತ್ತರಿ ಊರೊರ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡವ ಸಮುದಾಯದ ಜನಸಂಖ್ಯೆ ಈ ಭಾಗದಲ್ಲಿ ಕಡಿಮೆಯಿದ್ದರೂ ಸಮಾಜದ ಮೂಲಕ ಒಂದಾಗಿರುವುದು ಶ್ಲಾಘನೀಯ ಎಂದ ಅವರು, ಸಮುದಾಯದ ಬೆಳವಣಿಗೆಗೆ ದಾನಿಗಳು ಕೈಜೋಡಿಸಬೇಕು ಎಂದರು. ಯಾವುದೇ ಸಮಾಜವಾದರೂ ಸಂಘಟನೆಯ ಮೂಲಕ ಒಂದಾಗಬೇಕು. ಸಂಸ್ಕತಿ ಉಳಿಸಬೇಕು. ಭಾರತದ ಜನಸಂಖ್ಯೆಗೆ ಹೋಲಿಸಿದರೆ ಕೊಡವ ಸಮಾಜದ ಸಂಖ್ಯೆ ಕಡಿಮೆಯಿದ್ದರೂ ಸಾಂಸ್ಕ್ರತಿಕವಾಗಿ ಶ್ರೀಮಂತವಾಗಿದೆ. ಕೊಡಗಿನ ಭೂಮಿಯನ್ನು ಹಣಕ್ಕಾಗಿ ಬೇರೆಯವರಿಗೆ ಮಾರಾಟ ಮಾಡಬಾರದು. ಹೊರಗಿನವರ ದರ್ಬಾರಿಗೆ ಕೊಡಗಿನವರು ಒಳಪಡಬಾರದು. ಈ ಮಣ್ಣಿನೊಂದಿಗೆ ನಮ್ಮ ಸಂಸ್ಕೃತಿ ಮಿಳಿತವಾಗಿದೆ. ಈ ನಿಟ್ಟಿನಲ್ಲಿ ಕೊಡಗು ಕೊಡಗಾಗಿಯೇ ಉಳಿಯಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಸಮಾಜದಿಂದ ಆಚರಿಸುವ ಸಾಮೂಹಿಕ ಹಬ್ಬಗಳಲ್ಲಿ ಸಮುದಾಯದ ಎಲ್ಲರೂ ಭಾಗವಹಿಸಬೇಕು. ಸಂಸ್ಕ್ರತಿ, ಆಚಾರ ವಿಚಾರ ಉಳಿಯಬೇಕಾದರೆ ಮೊದಲು ಅದರ ಬಗ್ಗೆ ಪ್ರೀತಿ ಗೌರವ ಬೆಳೆಸಿಕೊಂಡು ಆಚರಣೆಗೆ ತರಬೇಕು ಎಂದರು.

೨೦೧೮ರಲ್ಲಿ ಭೂಕುಸಿತ ಸಂಭವಿಸಿದ ಸಂದರ್ಭ ಹೆಚ್ಚಿನ ಕೊಡವ ಕುಟುಂಬಗಳು ನಷ್ಟ ಅನುಭವಿಸಿದ್ದವು. ಜಿಲ್ಲೆಯ ೩೦೦ ಕುಟುಂಬಗಳಿಗೆ ಬೆಂಗಳೂರು ಕೊಡವ ಸಮಾಜದಿಂದ ರೂ. ೨.೬೫ ಕೋಟಿ ಸಹಾಯಧನವನ್ನು ಒದಗಿಸಲಾಗಿದೆ ಎಂದು ಸ್ಮರಿಸಿದರು. ಸಮಾಜದ ಕೆಲಸ ಕಾರ್ಯಗಳಲ್ಲಿ ಮಹಿಳೆಯರೂ ಸಹ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಚಿಕ್ಕಮಗಳೂರು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಮಾತಂಡ ಸಿ. ಕಾರ್ಯಪ್ಪ, ಕೊಡಗಿನ ತೋಟ ಮಾಲೀಕರು ಸರ್ಕಾರದ ವಿವಿಧ ಯೋಜನೆಗಳು, ಕಾಫಿ ಮಂಡಳಿಯ ಕಾರ್ಯಕ್ರಮಗಳು, ಸಹಾಯಧನದ ಬಗ್ಗೆ ಮಾಹಿತಿ ಪಡೆದು, ಸೌಲಭ್ಯ ಹೊಂದಿಕೊಳ್ಳಬೇಕು. ವೈಜ್ಞಾನಿಕ ಕೃಷಿ ಪದ್ದತಿಯ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಬಿ. ಅಭಿಮನ್ಯುಕುಮಾರ್, ಎಲ್ಲರನ್ನೂ ಪ್ರೀತಿಯಿಂದ ಕಾಣುವ ಮೂಲಕ ಕೊಡವ ಸಮಾಜದ ಹೆಗ್ಗುರುತು ಮೂಡಿಸಬೇಕು.

ಜನಾಂಗ ಉಳಿಸಲು ಎಲ್ಲರೂ ಕೈಜೋಡಿಸಬೇಕು. ಯುವ ಜನಾಂಗ ಸಮಾಜ ಕಾರ್ಯಕ್ಕೆ ಮುಂದೆ ಬರಬೇಕು ಎಂದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಬೊಳಂದAಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೇರ ಅನಿಲ್ ಉಪಸ್ಥಿತರಿದ್ದರು.

ಹಂಚೆಟ್ಟಿರ ಸಾರಿಕಾ ತಮ್ಮಯ್ಯ ಪ್ರಾರ್ಥಿಸಿ, ಮಚ್ಚಂಡ ಪ್ರಕಾಶ್ ಬೆಳ್ಯಪ್ಪ ಸ್ವಾಗತಿಸಿದರು. ತೇಲಪಂಡ ಕವನ್ ಕಾರ್ಯಪ್ಪ, ಸುನು ಕಿಶೋರ್, ಪಾಡೆಯಂಡ ಮುತ್ತಣ್ಣ, ಮಾಳೇಟಿರ ಅಶ್ವಿನಿ, ಮಲ್ಲಾಜೀರ ನೇಹಾ ದೇಚಮ್ಮ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಅಂತರ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ ಶಿರಂಗಳ್ಳಿ ಗ್ರಾಮದ ಮೋಟನಾಳೀರ ಸನ್ನಿ ಕಾರ್ಯಪ್ಪ ಅವರ ಪುತ್ರ ಸಮಯ್ ಗಣಪತಿ ಅವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ, ವೃತ್ತಿಪರ ಕೋರ್ಸ್, ಸ್ನಾತಕ್ಕೋತ್ತರ ಪದವಿಯಲ್ಲಿ ಶೇ.೭೦ಕ್ಕಿಂತ ಅಧಿಕ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ನಂತರ ಗರ್ವಾಲೆ ಗ್ರಾಮದ ಬೊಟ್ಲಪ್ಪ ತಂಡದಿAದ ಬೊಳಕಾಟ್, ಕೋಲಾಟ್, ಕತ್ತಿಯಾಟ್, ಮೂವತ್ತೊಕ್ಲು ನಾಗಂಡ ತಂಡದಿAದ ಉಮ್ಮತ್ತಾಟ್ ಪ್ರದರ್ಶನ ಮೂಡಿಬಂತು. ಸಮಾಜದ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.