ಗೋಣಿಕೊಪ್ಪಲು, ಡಿ.೨೮: ಗೋಣಿಕೊಪ್ಪ ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಮುAಜಾಗ್ರತೆ ವಹಿಸಿದ ಸ್ಥಳೀಯ ನಾಗರಿಕರು ಹೆಚ್ಚಿನ ಅನಾಹುತ ತಪ್ಪಿಸಲು ಬೀದಿ ನಾಯಿಯನ್ನು ಹೊಡೆದು ಸಾಯಿಸಿದ್ದಾರೆ. ಯುವನಿಕಾ(೧೩), ಗ್ರಹಿತ ವಿ.ಆರ್. (೧೦), ಶ್ರೀನಿವಾಸ್ (೪೫), ತಜವೀಯ (೨೫) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಗೋಣಿಕೊಪ್ಪ ಪಟ್ಟಣದ ಅನತಿದೂರದ ಮೈಸೂರಮ್ಮ ನಗರದಿಂದ ಬೆಳಿಗ್ಗೆ ಗೋಣಿಕೊಪ್ಪ ಬಸ್ ನಿಲ್ದಾಣಕ್ಕೆ ಬರುವ ರಸ್ತೆ ಮಾರ್ಗದಲ್ಲಿ ಶಾಲೆಗೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮತ್ತು ಇನ್ನಿಬ್ಬರ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ.

ಪರಿಣಾಮ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಗೋಣಿಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ. ಮುನ್ನೆಚ್ಚರಿಕೆ ವಹಿಸಿದ ಸ್ಥಳೀಯರು ವಿದ್ಯಾರ್ಥಿಗಳು ಮತ್ತು ಜನರ ಮೇಲೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಯಿಂದ ಮತ್ತಷ್ಟು ಸಮಸ್ಯೆ, ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ.

ಗೋಣಿಕೊಪ್ಪದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ರಸ್ತೆಯಲ್ಲಿ ತೆರಳಲು ಭಯಪಡುವಂತಾಗಿದೆ. ಸಣ್ಣ ಮಕ್ಕಳು, ವೃದ್ಧರ ಮೇಲೆ ದಾಳಿ ನಡೆಸುತ್ತಿವೆ. ಕೈಯಲ್ಲಿ ವಸ್ತುಗಳನ್ನು ಹಿಡಿದು ನಡೆದು ಹೋಗುತ್ತಿರುವಾಗ ದಾಳಿಗೆ ಮುಂದಾಗುತ್ತಿವೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸ್ಥಳೀಯ ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜನತೆ ಗ್ರಾ.ಪಂ.ಯನ್ನು ಆಗ್ರಹಿದ್ದಾರೆ.