ನಾಪೋಕ್ಲು, ಡಿ. ೨೮: ಭಾಗಮಂಡಲದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ೪೩ನೇ ವರ್ಷದ ಮಂಡಲ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು.
ವರ್ಷಂಪ್ರತಿ ಆಚರಿಸಿಕೊಂಡು ಬರುವಂತೆ ಈ ವರ್ಷವು ಶ್ರೀ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆಯು ಶೋಭಾಯಾತ್ರೆ, ಸಿಂಗಾರಿ ಮೇಳ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಜರುಗಿತು.
ಗುರುಸ್ವಾಮಿಗಳಾದ ಸಿ.ಆರ್. ಜಯನ್ ಮತ್ತು ಹೆಚ್.ಎಸ್. ವಸಂತ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಭಾಗಮಂಡಲದ ತಲಕಾವೇರಿ ರಸ್ತೆಯ ಬದಿಯಲ್ಲಿರುವ ಅಯ್ಯಪ್ಪ ಬನದಲ್ಲಿ ಪೂಜೆ ಪ್ರಾರಂಭಿಸಿ ನಂತರ ಸಿಂಗಾರಿ ಮೇಳದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಶೋಭಾಯಾತ್ರೆಯು ಭಾಗಮಂಡಲದ ಮುಖ್ಯರಸ್ತೆಯಲ್ಲಿ ಸಾಗಿ ಬಂದು ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ ಮಂಡಲ ಪೂಜೆ ನೆರವೇರಿತು.
ಈ ಸಂದರ್ಭ ಭಕ್ತಾದಿಗಳು ಪ್ರಸಾದ ವಿತರಣೆ ಮತ್ತು ಅನ್ನದಾನದಲ್ಲಿ ಪಾಲ್ಗೊಂಡರು. ಮಂಡಲ ಪೂಜೆಯಲ್ಲಿ ಭಾಗಮಂಡಲ, ಕರಿಕೆ, ಅಯ್ಯಂಗೇರಿ, ದೊಡ್ಡಪುಲಿಕೋಟು, ನಾಪೋಕ್ಲು, ಬೆಟ್ಟಗೇರಿ, ಚೇರಂಬಾಣೆ ಅಕ್ಕಪಕ್ಕದ ಊರುಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.