ಮಡಿಕೇರಿ, ಡಿ. ೨೯: ಭಾರತ ದೇಶದ ಅಭಿವೃದ್ಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯ ಆಡಳಿತ ಪ್ರಮುಖ ಪಾತ್ರ ವಹಿಸಿದೆ ಎಂದು ಬಿಜೆಪಿ ರಾಷ್ಟಿçÃಯ ಕಾರ್ಯದರ್ಶಿ, ಹರಿಯಾಣದ ಮಾಜಿ ಕೃಷಿ ಸಚಿವ ಓಂ ಪ್ರಕಾಶ್ ಧನಕರ್ ಅಭಿಮತ ವ್ಯಕ್ತಪಡಿಸಿದರು.

ಮಕ್ಕಂದೂರಿನ ಸಹಕಾರ ಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಸಮಾವೇಶ, ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ಧಿ ಹಾಗೂ ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಜಪೇಯಿ ಅವರು ದೇಶದ ಅಗ್ರಗಣ್ಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ಮಹತ್ತರ ಕಾರ್ಯಗಳನ್ನು ನಡೆಸಿ, ಯೋಜನೆಗಳನ್ನು ಅನುಷ್ಠಾನ ಮಾಡಿ ಭಾರತವನ್ನು ಸದೃಢಗೊಳಿಸುವಲ್ಲಿ ಶ್ರಮಿಸಿದ್ದಾರೆ. ಸೀಮಿತ ಅವಧಿಯಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದು ಜನಮನ್ನಣೆಗೂ ಪಾತ್ರರಾಗಿದ್ದರು. ವಿಜ್ಞಾನ, ಸಾಹಿತ್ಯ, ಸಂಪರ್ಕ ಕ್ರಾಂತಿಯೊAದಿಗೆ ಭಾರತ-ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಬಸ್ ಸಂಚಾರ ಆರಂಭಿಸಿದ್ದರು. ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ಸೇನೆಗೆ ಇವರು ನೀಡಿದ ಬಲ ವಿಜಯಕ್ಕೆ ಕಾರಣವಾಯಿತು. ಭಾರತವೂ ಆರ್ಥಿಕವಾಗಿ ಸದೃಢವಾಗಲು ಶ್ರಮಿಸಿದ್ದಾರೆ. ಇಂದಿಗೂ ಅವರ ಕೆಲಸಗಳು ಜೀವಂತವಾಗಿವೆ. ವಾಜಪೇಯಿ ಅವರ ಆದರ್ಶ ಜೀವನವನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು, ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿದ ವಾಜಪೇಯಿ ಅವರ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ದೇಶದ ಅಭಿವೃದ್ಧಿ ಮತ್ತು ರಕ್ಷಣೆ ದೃಷ್ಟಿಯಲ್ಲಿ ಕೈಗೊಂಡ ದಿಟ್ಟ ನಿರ್ಧಾರಗಳು ಸದಾ ಸ್ಮರಣಿಯ ಎಂದರು.

ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಪಾಲ್ಗೊಂಡು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ್ ಕಾರ್ಯಕ್ರಮದ ಅನುಷ್ಠಾನ ಮೂಲಕ ತಾಂತ್ರಿಕ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವ ಪಣ ತೊಟ್ಟಿದ್ದಾರೆ. ಸ್ವದೇಶಿ ಉತ್ಪನ್ನಗಳ ಉತ್ಪಾದನೆಗೆ ಒತ್ತು ನೀಡಿ ಸ್ವಾವಲಂಬನೆ ಭಾರತ ನಿರ್ಮಾಣ ಮಾಡುವ ಗುರಿಯ ಹಿನ್ನೆಲೆ ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ದೊರೆಯುತ್ತಿದೆ. ಸ್ವದೇಶಿ ವಸ್ತು ಬಳಕೆಯಿಂದ ದೇಶದ ಪ್ರಗತಿಯೂ ಸಾಧ್ಯ ಎಂದರು. ಚುನಾವಣೆ ಆಯೋಗ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಈ ನಡುವೆ ವಿಪಕ್ಷ ನಾಯಕ ರಾಹುಲ್ ಗಾಂಧಿ ‘ವೋಟ್ ಚೋರಿ’ ಎಂಬ ಸುಳ್ಳು ಆರೋಪಗಳನ್ನು ಮಾಡಿ ಜನರ ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಆದರೆ, ಕೆಲವು ರಾಜ್ಯಗಳಲ್ಲಿ ಕಂಡ ಹೀನಾಯ ಸೋಲು ರಾಹುಲ್ ಗಾಂಧಿ ಆರೋಪಕ್ಕೆ ಹುರುಳಿಲ್ಲ ಎಂಬುದನ್ನು ಸಾಬೀತು ಮಾಡಿದೆ. ಮುಂದೆ ಪಶ್ಚಿಮ ಬಂಗಾಳದಲ್ಲೂ ಇದೇ ರೀತಿ ಸೋಲು ಅನುಭವಿಸುವುದು ನಿಶ್ಚಿತ ಎಂದು ರವಿಕುಮಾರ್ ಭವಿಷ್ಯ ನುಡಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದರೂ ಕೊಡಗಿನಲ್ಲಿ ಪಕ್ಷ ಸಂಘಟನೆ ಗಟ್ಟಿಯಾಗಿದೆ. ಮುಂದೆ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಮತ್ತೇ ಪ್ರವರ್ಧಮಾನಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಉತ್ತಮವಾಗಿದ್ದು, ಮುಂದಿನ ಚುನಾವಣೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖಗೊಳ್ಳಬೇಕು. ಬೂತ್ ಮಟ್ಟದಿಂದಲೇ ಸಂಘಟಿತರಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರುಗಳಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಪಳೆಯಂಡ ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಪ್ರಮುಖರಾದ ರೀನಾ ಪ್ರಕಾಶ್, ಕೋಡಿ ಪೊನ್ನಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಸ್ವಾಗತಿಸಿ, ಮತ್ತೋರ್ವ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ವಂದಿಸಿದರು. ವಿ.ಕೆ. ಲೋಕೇಶ್ ನಿರೂಪಿಸಿದರು.