ಸೋಮವಾರಪೇಟೆ, ಡಿ. ೨೯: ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಸಂತೆ ದಿನವಾದ ಸೋಮವಾರದಂದು ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ಪ್ರದಕ್ಷಿಣೆ ಮಾಡಿ ಸಮಸ್ಯೆಗಳನ್ನು ಖುದ್ದು ಪರಿಶೀಲನೆ ನಡೆಸಿದರಲ್ಲದೆ, ತಕ್ಷಣ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿರುವ ಪಾರ್ಕಿಂಗ್ ಸಮಸ್ಯೆ, ತ್ಯಾಜ್ಯ ವಿಲೇವಾರಿ ಸಮಸ್ಯೆ, ಅಮೃತ್-೨ ಯೋಜನೆಯಿಂದ ಆಗಿರುವ ರಸ್ತೆಗಳ ಅವಾಂತರಗಳನ್ನು ಖುದ್ದು ವೀಕ್ಷಿಸಿದ ಶಾಸಕ ಡಾ. ಮಂತರ್‌ಗೌಡ ಅವರು, ತಕ್ಷಣ ಕ್ರಮ ವಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ಮಿತಿಮೀರಿದ್ದು, ಎಲ್ಲೆಂದರಲ್ಲಿ ವಾಹನಗಳು ನಿಲುಗಡೆಯಾಗುತ್ತಿವೆ. ಸಂತೆ ದಿನದಂದು ಗ್ರಾಮೀಣ ಭಾಗದಿಂದ ಆಗಮಿಸುವ ರೈತರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಇಲ್ಲವಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ, ಏಕಮುಖ ಸಂಚಾರ ಪಾಲಿಸದೇ ಇರುವುದು. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಯಿಂದ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಪಟ್ಟಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಪಟ್ಟಣ ಪಂಚಾಯಿತಿಯ ಸಹಕಾರದೊಂದಿಗೆ ಸಮಸ್ಯೆ ಬಗೆಹರಿಸಬೇಕು. ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಟ್ರಾಫಿಕ್ ಕೆಲಸಕ್ಕೆ ನಿಯೋಜಿಸಬೇಕೆಂದು ಸ್ಥಳದಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ ಅವರಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿಯ ಮೂಲಕ ರೂ. ೫ ಲಕ್ಷ ವೆಚ್ಚದಲ್ಲಿ ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಮಾರ್ಕಿಂಗ್ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು. ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ರೂ. ೮೦ ಲಕ್ಷ ವೆಚ್ಚದಲ್ಲಿ ಪೇ ಪಾರ್ಕಿಂಗ್ ಕಾಮಗಾರಿ ನಡೆಯಲಿದೆ ಎಂದರು.

ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಿಗಡಾಯಿಸುತ್ತಿದ್ದು, ಕಸಕ್ಕೆ ಬೆಂಕಿ ಹಾಕುತ್ತಿರುವುದರಿಂದ ಇಡೀ ಪ್ರದೇಶ ಹೊಗೆಯಿಂದ ಆವೃತ್ತವಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಸಿದ್ದಲಿಂಗಪುರದಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇದು ಪೂರ್ಣಗೊಂಡರೆ ಸಮಸ್ಯೆಗೆ ಪರಿಹಾರ ಲಭಿಸಲಿದೆ. ಆದಾಗ್ಯೂ ಪಟ್ಟಣದಲ್ಲಿ ಕಸಕ್ಕೆ ಯಾವುದೇ ಕಾರಣಕ್ಕೂ ಬೆಂಕಿ ಹಾಕಬಾರದು. ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂದು ಮಂತರ್ ಗೌಡ ನಿರ್ದೇಶನ ನೀಡಿದರು.

ಅಮೃತ್-೨ ಯೋಜನೆಯಡಿ ಪಟ್ಟಣದ ಎಲ್ಲಾ ರಸ್ತೆಗಳನ್ನು ಅಗೆದು ಪೈಪ್‌ಲೈನ್ ಹಾಕಲಾಗಿದೆ. ತದನಂತರ ಸರಿಯಾಗಿ ಗುಂಡಿ ಮುಚ್ಚದೇ ಇರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ ಎಂದು ಸಾರ್ವಜನಿಕರು ಗಮನ ಸೆಳೆದರು.

ಮುಂದಿನ ಒಂದು ವಾರದೊಳಗೆ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು. ತಪ್ಪಿದಲ್ಲಿ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಶಾಸಕರು, ರೂ. ೮೦ ಲಕ್ಷ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ಸಮೀಪದ ಜಾಗದಲ್ಲಿ ಪೇ ಪಾರ್ಕಿಂಗ್ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದೆ. ಮುಂದಿನ ವಾರ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಗುವುದು. ಆಟೋ ನಿಲ್ದಾಣ ಹಾಗೂ ಮೋಟಾರ್ ಯೂನಿಯನ್‌ನ ವಾಹನ ನಿಲ್ದಾಣಕ್ಕೆ ಓವರ್‌ಹೆಡ್ ಶೆಲ್ಟರ್ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ಶಾಸಕರ ನಿಧಿಯಿಂದ ಅನುದಾನ ಒದಗಿಸಲಾಗುವುದು ಎಂದರು.

ಭಾರೀ ಚಳಿಯ ನಡುವೆಯೂ, ಬೆಳ್ಳಂಬೆಳಗ್ಗೆಯೇ ಪಟ್ಟಣ ಪ್ರದಕ್ಷಿಣೆಗೆ ಆಗಮಿಸಿದ ಶಾಸಕರನ್ನು ಕಂಡು ಜನಸಾಮಾನ್ಯರು. ಆಶ್ಚರ್ಯಪಟ್ಟರು. ಶಾಸಕರೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ಸಂದರ್ಭ ಪ.ಪಂ. ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಜಾಸಿಂಖಾನ್, ಅಭಿಯಂತರ ಕೀರ್ತನ್, ಹೇಮಕುಮಾರ್, ಇನ್ಸ್ಪೆಕ್ಟರ್ ಮುದ್ದುಮಹದೇವ, ಪ್ರಮುಖರಾದ ಡಿ.ಯು. ಕಿರಣ್, ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ವಿನಿ, ಸುಜಿತ್, ಮಂಜುನಾಥ್, ಮಹಮ್ಮದ್ ಶಫಿ, ಜೇಕಬ್ ಸೈಮನ್, ಸೋಮೇಶ್ ಸೇರಿದಂತೆ ಇತರರು ಇದ್ದರು.