ನಾಪೋಕ್ಲು, ಡಿ. ೨೯: ವಾಹನಗಳ ಮೇಲೆ ಕಾಡಾನೆ ದಾಳಿಯಿಟ್ಟ ಪರಿಣಾಮ ಆಟೋ, ಬೈಕ್ ಜಖಂಗೊAಡ ಘಟನೆ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು ಗ್ರಾಮದ ಮಂಜಾಟ್ ಗಿರಿಜನ ಕಾಲೋನಿಯಲ್ಲಿ ಸಂಭವಿಸಿದೆ.

ಕಾಡಾನೆ ಹಿಂಡು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ನಿವಾಸಿ ಕೆ.ಕೆ ಅರ್ಜುನ ಅವರಿಗೆ ಸೇರಿದ ಆಟೋ (ಕೆಎ.೧೨. ೩೩೦೭) ಹಾಗೂ ಕೆ.ಪಿ. ಪೂವಯ್ಯ ಅವರ ಆಟೋ (ಕೆಎ.೧೨.೮೬೬೩) ಸೇರಿದಂತೆ ಪಿ.ಎಂ. ಪೂಣಚ್ಚ ಅವರ ಬೈಕ್ ಅನ್ನು ಹಾನಿಗೊಳಿಸಿದೆ. ಘಟನೆಯಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಗದ್ದೆ ಹಾಗೂ ತೋಟಗಳಿಗೆ ನಿರಂತರ ದಾಳಿ ಮಾಡಿ ಫಸಲು ನಾಶ ಮಾಡುತ್ತಿರುವ ಘಟನೆಯೂ ನಡೆಯುತ್ತಿದೆ.

ಇದೀಗ ಕಾಫಿ ಕೊಯ್ಲು ಸಮಯವಾಗಿರುವುದರಿಂದಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಾತ್ರವಲ್ಲದೆ ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳಲು ತೀವ್ರ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸಿ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.