ನಾಪೋಕ್ಲು, ಡಿ. ೨೯: ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆಯುವುದರೊಂದಿಗೆ ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಂಡು ಉನ್ನತಿ ಸಾಧಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಹೇಳಿದರು.

ಇಲ್ಲಿನ ಅಂಕುರ್ ಪಬ್ಲಿಕ್ ಸ್ಕೂಲ್‌ನ ೨೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಹಂತದಲ್ಲಿ ಸತತ ಪ್ರಯತ್ನದಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯ ಅವರು ಕಿವಿ ಮಾತು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಅಶೋಕ್ ಸಂಗಪ್ಪ ಆಲೂರ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಮುಂದುವರಿಯುವುದು ಮಾತ್ರವಲ್ಲದೆ ಉತ್ತಮ ಗುಣಗಳನ್ನು ಶಿಕ್ಷಕರಿಂದ, ಪೋಷಕರಿಂದ, ಹಿರಿಯರಿಂದ ಕಲಿಯಬೇಕು ಎಂದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ್ಣ ವಿದ್ಯಾ ಸಂಸ್ಥೆಯ ೨೫ ವರ್ಷಗಳ ಸಾಧನೆ ಹಾಗೂ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.

ಈ ಸಂದರ್ಭ ವಿದ್ಯಾ ಸಂಸ್ಥೆಯ ಬೆಳವಣಿಗೆಗೆ ಪ್ರೋತ್ಸಾಹಿಸಿ ಸಹಕರಿಸಿದ ಕೇಲೇಟಿರ ಪುಷ್ಪಾಂಜಲಿ, ಮೊವೆರ ಧರಣಿ ಗಣಪತಿ, ಮಣವಟ್ಟಿರ ದೊರೆ ಸೋಮಣ್ಣ ಪರವಾಗಿ ಮಗಳು ಗೌರಮ್ಮ, ನವೀನ್ ಕಾರ್ಯಪ್ಪ, ಉಪ ಪ್ರಾಂಶುಪಾಲೆ ಆಶಾ ಬೋಪಣ್ಣ ಇನ್ನಿತರರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು

ಈ ಸಂದರ್ಭ ವಿದ್ಯಾಸಂಸ್ಥೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ್ಣ, ಟ್ರಸ್ಟಿಗಳಾದ ಕರುಂಬಯ್ಯ, ಕೆ. ಆರ್. ಗಾಯನ್ ಗೌರಮ್ಮ, ಪ್ರಾಂಶುಪಾಲೆ ಶಿಕ್ಷಕ ವೃಂದ, ಸಿಬ್ಬಂದಿಗಳು ಕುಲ್ಲಚೆಟ್ಟಿರ ಮಮತ ಹಾಗೂ ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಅನನ್ಯ ಅಯ್ಯಪ್ಪ ಸ್ವಾಗತಿಸಿ, ಶಿಕ್ಷಕಿ ಆಶಾ, ವಿದ್ಯಾರ್ಥಿಗಳಾದ ಕನ್ನಿಕ ಹಾಗೂ ಸೋಮಣ್ಣ ನಿರೂಪಿಸಿದರು, ವಿದ್ಯಾರ್ಥಿ ಯೋಹನ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.