ಕಣಿವೆ, ಡಿ. ೩೦: ಒಂದು ಕಾಲದಲ್ಲಿ ಕೊಡಗು ಜಿಲ್ಲೆಯ ಮಟ್ಟಿಗೆ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಸುಸಜ್ಜಿತ ಜನವಸತಿಯಾಗಿದ್ದ ಕುಶಾಲನಗರದ ಹೌಸಿಂಗ್ ಬೋರ್ಡ್ ಕಾಲೋನಿ ಇಂದು ಹೇಳಹೆಸರಿಲ್ಲದಂತೆ ಹಾಳಾಗಿ ನಿಂತಿದೆ.

೧೯೭೦ ರಲ್ಲಿ ಹಾರಂಗಿ ಜಲಾಶಯದ ನಿರ್ಮಾಣದ ಅವಧಿಯಲ್ಲಿ ಜಲಾಶಯದಲ್ಲಿ ಹಾಗೂ ಜಲಾನಯನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆAದು ನೀರಾವರಿ ಇಲಾಖೆ ವತಿಯಿಂದ ನಿರ್ಮಾಣಗೊಂಡಿದ್ದ ಜನವಸತಿ ಪ್ರದೇಶ ಇಂದು ನಿರ್ವಹಣೆ ಇಲ್ಲದೆ ಪೂರ್ಣ ನಿರ್ನಾಮದತ್ತ ಸಾಗಿದೆ.

ಸರ್ಕಾರ ೧೯೬೯ ರಲ್ಲಿ ಭೂ ಸ್ವಾಧೀನ ಮಾಡಿಕೊಂಡಿದ್ದ ಸರ್ವೆ ನಂಬರ್ ೪೫/೨, ೪೭/೧ ಹಾಗೂ ೪೮/೨ ರ ೧೩.೫೦ ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ಸುಮಾರು ೧೦೭ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು.

ಆರಂಭದ ಕೆಲವು ವರ್ಷಗಳವರೆಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಿ ವಾಸವಿದ್ದರು. ಕ್ರಮೇಣ ಬೇರೆ ಬೇರೆ ಇಲಾಖೆಗಳ ನೌಕರರು ಕರಾರಿನ ಮೇಲೆ ಇಲ್ಲಿ ವಾಸವಿದ್ದರು.

ಈಗಲೂ ಕೆಲವರು ವಾಸವಿದ್ದಾರೆ.

ಪಾಳು ಬಿದ್ದ ಮನೆಗಳು

೧೯೭೦ ರಲ್ಲಿ ನಿರ್ಮಾಣ ಮಾಡಿದ ಮನೆಗಳು ನಿರ್ವಹಣೆ ಇಲ್ಲದ ಕಾರಣ ಕಾಡು ಗಿಡಗಳು ಬೆಳೆದು ಕುಸಿಯಲು ಆರಂಭಿಸಿವೆ. ಬಾಡಿಗೆ ಇದ್ದವರು ಮನೆಗಳು ಮಳೆಗಾಲದಲ್ಲಿ ಸೋರುವುದನ್ನು ನಿಲ್ಲಿಸುವಂತೆ ಸಣ್ಣ ಪುಟ್ಟ ದುರಸ್ತಿ ಮಾಡಿಕೊಡುವಂತೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಅನುದಾನ ಇಲ್ಲದ ಕಾರಣ ಅಧಿಕಾರಿಗಳು ಕೈ ಚೆಲ್ಲಿದ್ದಾರೆ. ಬಳಿಕ ಮನೆಗಳು ಶಿಥಿಲಾವಸ್ಥೆ ತಲುಪಿದ ಬಳಿಕ ಒಬ್ಬೊಬ್ಬರೇ ಖಾಲಿ ಮಾಡಿದ್ದಾರೆ. ಹಾಗಾಗಿ ೧೦೭ ಮನೆಗಳ ಪೈಕಿ ಇಂದು ಕೇವಲ ೫೭ ಮನೆಗಳಲ್ಲಿ ಕೆಲವು ಸಿಬ್ಬಂದಿಗಳು ಮಾತ್ರ ವಾಸವಿದ್ದಾರೆ.

೧೫ ವರ್ಷಗಳಿಂದ ನಿರ್ವಹಣೆ ಇಲ್ಲ

ಕಳೆದ ೧೫ ವರ್ಷಗಳಿಂದ ಇಲ್ಲಿನ ಜನವಸತಿ ನಿರ್ವಹಣೆಗೆ ಸೂಕ್ತ ಅನುದಾನ ಹಣಕಾಸು ಸೌಲಭ್ಯ ಒದಗದ ಕಾರಣ ಎಲ್ಲವೂ ಸ್ಥಗಿತಗೊಂಡಿದೆ. ಮನೆಗಳ ಮೇಲೆ ಹಾಗೂ ಮನೆಗಳ ಸುತ್ತಲೂ ಕಾಡು ಗಿಡಗಳು ಬೆಳೆದು ನಿಂತರೆ, ಇನ್ನು ಚರಂಡಿಗಳು ಕೂಡ ಇಲ್ಲದೇ ಇಲಿ, ಹೆಗ್ಗಣಗಳು ವಾಸ ಮಾಡುತ್ತಿವೆ. ರಸ್ತೆಗಳ ಸ್ಥಿತಿಯಂತೂ ಹೇಳ ತೀರದಂತಾಗಿದೆ. ಇಲ್ಲಿನ ಜನವಸತಿಯ ಎಲ್ಲಾ ರಸ್ತೆಗಳು ಕೂಡ ಕಿತ್ತು ನಿಂತು ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ರಕ್ಷಾ ಕವಚದ ಜನವಸತಿಯಾಗಿತ್ತು

ಕುಶಾಲನಗರದ ಹಾರಂಗಿ ಜಲಾಶಯದ ಪುನರ್ವಸತಿ ವಿಭಾಗದ ಜನವಸತಿ ಸುಮಾರು ೧೯೭೦ ರಿಂದಲೂ ಸುತ್ತಲೂ ರಕ್ಷಾ ಕವಚ ಹಾಗೂ ಸೂಕ್ತ ಗೇಟುಗಳೊಂದಿಗೆ ಆಕರ್ಷಕವಾಗಿತ್ತು. ಇಲ್ಲಿ ಸರ್ಕಾರಿ ಸಂಯುಕ್ತ ಕಾಲೇಜು ನಿರ್ಮಾಣವಾದ ಬಳಿಕ ನೀರಾವರಿ ಇಲಾಖೆಯ ಜನವಸತಿಯ ಗೇಟು ಮುರಿದು ಬಿತ್ತು. ಮೊದಲು ಇಲ್ಲಿಗೆ ಜನರು ಕೂಡ ಬರಲು ಹಿಂದೇಟು ಹಾಕುತ್ತಿದ್ದರು. ಕ್ರಮೇಣ ಬೀಡಾಡಿ ದನಗಳ ಮೇವಿನ ತಾಣವಾಗಿ ಈ ಪ್ರದೇಶ ಮಾರ್ಪಟ್ಟಿದೆ.

ಐದು ಕೋಟಿ ಟೆಂಡರ್

ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎಂಬ ನಾಣ್ಣುಡಿಯಂತೆ ಈ ಜನವಸತಿ ಪ್ರದೇಶದಲ್ಲಿ ಹಾಳಾಗಿ ಅಪಾಯದಲ್ಲಿರುವ ಮನೆಗಳನ್ನು ನಿರ್ಮಿಸಲು ಅನುದಾನ ನೀಡದೇ, ಕೇವಲ ರಸ್ತೆಗಳ ಡಾಂಬರೀಕರಣಕ್ಕೆ ಬರೋಬ್ಬರಿ ೫ ಕೋಟಿ ರೂ.ಗಳನ್ನು ಮೀಸಲಿರಿಸಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿನ ಉದ್ಯಾನವೂ ನಿರ್ವಹಣೆ ಇಲ್ಲದೇ ಅಧ್ವಾನವಾಗಿದೆ. ಇನ್ನು ಅಧೀಕ್ಷಕ ಅಭಿಯಂತರರ ಸರ್ಕಾರಿ ನಿವಾಸವೂ ಕೂಡ ವಾಸವಿಲ್ಲದ ಪರಿಣಾಮ ಕಾಡು ಗಿಡಗಳು ಬೆಳೆದಿವೆ. ಕುಶಾಲನಗರ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಮುಂಜಾನೆ ಹಾಗೂ ಮುಸ್ಸಂಜೆ ವಾಯು ವಿಹಾರಿಗಳ ಸಂಖ್ಯೆಯೂ ಇಲ್ಲಿ ಹೆಚ್ಚಿದ್ದು ಒಂದೇ ಒಂದು ವಿದ್ಯುತ್ ದೀಪಗಳು ಇಲ್ಲಿ ಬೆಳಗದೇ ಕತ್ತಲೆಯ ಕೂಪವಾಗಿದೆ. - ಕೆ.ಎಸ್. ಮೂರ್ತಿ